ಮುಂಬೈ[ಮೇ.27]: ತನ್ನ ಸೀನಿಯರ್ಸ್ ಪದೇ ಪದೇ ಜಾತಿ ವಿಚಾರವಾಗಿ ನಿಂದಿಸುತ್ತಿದ್ದರಿಂದ ಬೇಸತ್ತ ಮುಂಬೈನ ನಾಯರ್ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿನಿ ಪಾಯತ್ ತಡ್ವೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಮಗಳು ಈ ವಿಚಾರದ ಕುರಿತಾಗಿ ಆಸ್ಪತ್ರೆಯ ಆಡಳಿತ ಮಂಡಳಿ ದೂರು ನೀಡಿದ್ದಳು. ಹೀಗಿದ್ದರೂ ಅವರು ಯಾವುದೇ ರೀತಿ ಕ್ರಮ ಕೈಗೊಂಡಿರಲಿಲ್ಲ ಎಂದು ಮೃತ ವಿದ್ಯಾರ್ಥಿನಿಯ ಪೊಲೀಷಕರು ಅಳಲು ತೋಡಿಕೊಂಡಿದ್ದಾರೆ.

2018ರಲ್ಲಿ ಪಾಯಲ್ ತಡ್ವೀ ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ದಾಖಲಾತಿ ಪಡೆದುಕೊಳ್ಳುತ್ತಾರೆ. ಪಾಯಲ್ ಮೀಸಲಾತಿ ಕೋಟಾದಿಂದ ಸೀಟು ಪಡೆದು ಸೇರಿರುವ ವಿಚಾರ ಆಕೆಯ ಮೂವರು ಸೀನಿಯರ್ಸ್ ಗೆ ತಿಳಿಯುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡ ಹಿರಿಯ ವಿದ್ಯಾರ್ಥಿನಿಯರು ಪಾಯಲ್ ಜಾತಿ ವಿಚಾರವಾಗಿ ಪದೇ ಪದೇ ಮಾನಸಿಕ ಕಿರುಕುಳ ಕೊಡುತ್ತಿದ್ದರು. 

ಆದರೆ ಹಿರಿಯ ವಿದ್ಯಾರ್ಥಿನಿಯರ ಈ ಕಾಟ ಮುಂದುವರೆಯುವುದನ್ನು ಗಮನಿಸಿದ ಪಾಯಲ್ ಬೇರೆ ದಾರಿ ಕಾಣದೆ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಆದರೆ ಆಡಳಿತ ಮಂಡಳಿ ಮಾತ್ರ ಈ ವಿಚಾರವಾಗಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇತ್ತ ಪಾಯಲ್ ಬೇರೆ ದಾರಿ ಕಾಣದೆ ಮಾನಸಿಕ ಕಿರುಕುಳ ತಡೆಯಲಾರದೆ ಮೇ 22ರಂದು ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಆಕೆಯ ಕುಟುಂಬ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. 

ಪಾಯಲ್ ಆತ್ಮಹತ್ಯೆ ಪ್ರಕರಣ ಸದ್ದು ಮಾಡುತ್ತಿದ್ದಂತೆಯೇ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಹೊತ್ತಿರುವ ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪಾಯಲ್ ಸಹಪಾಠಿಗಳು 'ಪಾಯಲ್ ದಾಖಲಾತಿ ಪಡೆದ ದಿನದಿಂದ ಸೀನಿಯರ್ಸ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ದೂರು ನೀಡಿದರೂ ಯಾವುದೇ ಪ್ರಯೋಜನವಾಗದಿದ್ದಾಗ ಪಾಯಲ್ ಮತ್ತೆ ನೊಂದಿದ್ದಾಳೆ. ಅಲ್ಲದೇ ಈ ವಿಚಾರ ಸೀನಿಯರ್ಸ್ ಗಮನಕ್ಕೆ ಬಂದಾಗ ಕಿರುಕುಳ ಮತ್ತಷ್ಟು ಹೆಚ್ಚಾಗಿತ್ತು' ಎಂದಿದ್ದಾರೆ. 

ಘಟನೆಯ ಬಳಿಕ ವಿದ್ಯಾರ್ಥಿಗಳು ಈ ಪ್ರಕರಣದ ವಿರುದ್ಧ ಧ್ವನಿ ಎತ್ತಿದ್ದು, ಯವುದೇ ಕ್ರಮ ಕೈಗೊಳ್ಳದ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.