ನವದೆಹಲಿ[ಜು.22]: 2008ರ ಮುಂಬೈ ದಾಳಿ ರೂವಾರಿ ಹಫೀಜ್‌ ಸಯೀದ್‌ನನ್ನು ಪಾಕಿಸ್ತಾನ ಬಂಧಿಸಿದ ಬೆನ್ನಲ್ಲೇ, ಸಯೀದ್‌ ಭಾರತದಲ್ಲಿ ಭಯೋತ್ಪಾದಕ ಸಂಘಟನೆಗಳ ಸ್ಲೀಪರ್‌ ಸೆಲ್‌ ಸ್ಥಾಪಿಸುವ ಸಲುವಾಗಿ ಹವಾಲಾ ಜಾಲ ಸ್ಥಾಪಿಸಿದ್ದ ವಿಚಾರವನ್ನು ಎನ್‌ಐಎ ಸಾಕ್ಷಿ ಸಮೇತ ಬಯಲಿಗೆಳೆದಿದೆ.

ಸಯೀದ್‌ ನೇತೃತ್ವದ ಫಲಾಹ್‌-ಇ-ಇನ್ಸಾನಿಯತ್‌ ಫೌಂಡೇಶನ್‌ಗೆ ಸೇರಿದ ಮೊಹಮ್ಮದ್‌ ಹುಸೇನ್‌ ಮೊಲಾನಿ ಎಂಬುವನ ವಿರುದ್ಧ ಜು.18ರಂದು ಎನ್‌ಐಎ ಚಾಜ್‌ರ್‍ಶೀಟ್‌ ಸಲ್ಲಿಕೆ ಮಾಡಿತ್ತು. ಬಳಿಕ ಈ ಕುರಿತು ತನಿಖೆ ಕೈಗೊಂಡಿದ್ದ ಎನ್‌ಐಎಗೆ, ‘ಮಸೀದಿ ಮತ್ತು ಮದ್ರಸಾ ಕಟ್ಟುವ ನೆಪದಲ್ಲಿ ಸಯೀದ್‌ ಮತ್ತು ಮೊಲಾನಿ 2012ರಲ್ಲೇ ದೆಹಲಿ ಮತ್ತು ಹರ್ಯಾಣದಲ್ಲಿ ಸ್ಲೀಪರ್‌ ಸೆಲ್‌ ಜಾಲ ಸ್ಥಾಪಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಜೊತೆಗೆ ದುಬೈನಲ್ಲಿರುವ ಪಾಕ್‌ ಮೂಲದ ಮೊಹಮ್ಮದ್‌ ಕಮ್ರಾನ್‌ ಎಂಬಾತ ಪಾಕಿಸ್ತಾನದಿಂದ ಹಣವನ್ನು ಹವಾಲಾ ಜಾಲದ ಮೂಲಕ ಭಾರತಕ್ಕೆ ರವಾನಿಸುತ್ತಿದ್ದ. ಅದನ್ನು ಭಾರತದಲ್ಲಿನ ಸ್ಲೀಪರ್‌ ಸೆಲ್‌ಗಳಿಗೆ ತಲುಪಿಸಲಾಗುತ್ತಿತ್ತು. ಅದನ್ನು ಬಳಸಿಕೊಂಡು ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ವಿಷಯವನ್ನು ಎನ್‌ಐಎ ಕಂಡುಕೊಂಡಿದೆ.