ಶೀಘ್ರವೇ ಜೆಡಿಎಸ್ ನಲ್ಲಿ ಮೇಜರ್ ಸರ್ಜರಿ ಮಾಡಲಾಗುವುದು ಎಂದು ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ. 

ಬೆಂಗಳೂರು : ಶೀಘ್ರದಲ್ಲಿಯೇ ಪಕ್ಷದ ರಾಜ್ಯ ಪದಾಧಿಕಾರಿಗಳ ಬದಲಾವಣೆ ಮಾಡಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

ಪಕ್ಷದಲ್ಲಿ ನಿಷ್ಕ್ರೀಯ ಪದಾಧಿಕಾರಿಗಳ ಬದಲಾವಣೆ ಮಾಡುವ ಚಿಂತನೆ ಮೊದಲಿನಿಂದಲೂ ನಡೆದಿದ್ದು, ಇದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಪಕ್ಷದ ಹೈಕಮಾಂಡ್‌ ಸಹ ಸಹಮತ ವ್ಯಕ್ತಪಡಿಸಿದೆ. 

ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಿಷ್ಕ್ರೀಯವಾಗಿರುವ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಾಗುವುದು. ಜತೆಗೆ ಹೊಸತಂಡ ರಚನೆ ಮಾಡಿ ಯುವಕರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಎಂದರು.

ರಾಹು ಕೇತು ಬಿಜೆಪಿಯಲ್ಲಿ 

 ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದಂತೆ ನಮ್ಮ ಪಕ್ಷದಲ್ಲಿ ಯಾವ ರಾಹು, ಕೇತುವೂ ಇಲ್ಲ. ಬಿಜೆಪಿಯಲ್ಲಿಯೇ ರಾಹು, ಕೇತುಗಳಿವೆ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ತಿರುಗೇಟು ನೀಡಿದ್ದಾರೆ.

ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಮಂಗಳವಾರ ನಡೆದ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಗತ್ತಿನ ಸುತ್ತ ರಾಹು, ಕೇತುಗಳು ಸುತ್ತುತ್ತಿವೆ. ಯಡಿಯೂರಪ್ಪ ಹೇಳಿದಂತೆ ನಮ್ಮಲ್ಲಿ ರಾಹು, ಕೇತುಗಳಿಲ್ಲ. ಗ್ರಹಗಳ ಸತ್ಯಾಸತ್ಯತೆಯನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಮಹಾತ್ಮರು ಆಡಳಿತ ನಡೆಸಿದಂತೆ ಈ ದೇಶದಲ್ಲಿ ರಾಜಕೀಯ ಶುದ್ಧೀಕರಣವಾಗಬೇಕು. ಅಲ್ಲದೇ, ಸ್ವಚ್ಛ ಭಾರತ ಎಂದು ಕಸ ಗುಡಿಸಿದರೆ ಸಾಲದು, ರಾಜಕಾರಣದಲ್ಲಿ ಸ್ವಚ್ಛ ಭಾರತವಾಗಬೇಕಿದೆ. 

ಎಷ್ಟೇ ಅಡೆತಡೆಗಳು ಎದುರಾದರೂ ಗಾಂಧೀಜಿ, ಶಾಸ್ತ್ರಿಯವರು ಎಂದಿಗೂ ಹೋರಾಟದ ಹಾದಿಯಿಂದ ವಿಮುಖವಾಗಲಿಲ್ಲ. ಹಲವು ಸವಾಲುಗಳನ್ನು ಎದುರಿಸುತ್ತಲೇ ಗುರಿ ಮುಟ್ಟಿದರು. ಗಾಂಧೀಜಿ ಮತ್ತು ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಮಹಾನ್‌ ಚೇತನರಾಗಿದ್ದು, ಅವರನ್ನು ಸದಾ ಕಾಲ ನೆನಪಿಸಿಕೊಳ್ಳಬೇಕು. ಅವರು ಪಾಲಿಸಿದ ತತ್ವ, ನಿಷ್ಠೆ, ಶ್ರದ್ಧೆ, ಬದ್ಧತೆಯನ್ನು ಪ್ರತಿಯೊಬ್ಬರು ಅನುಸರಿಸಬೇಕಿದೆ ಎಂದು ತಿಳಿಸಿದರು.