ಬೆಂಗಳೂರು [ಆ.25]:  ಮೈತ್ರಿ ಸರ್ಕಾರ ಪತನಕ್ಕೆ ಮುಖ್ಯ ಕಾರಣ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ. ಅವರಿಬ್ಬರೂ ಸೇರಿ ಮೈತ್ರಿಯನ್ನು ಕೊಂದು ಸಮಾಧಿ ಮಾಡಿದರು ಎಂದು ಅನರ್ಹಗೊಂಡಿರುವ ಶಾಸಕ ಎಚ್‌. ವಿಶ್ವನಾಥ್‌ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು,ಈಗ ಆರೋಪ- ಪ್ರತ್ಯಾರೋಪ ಮಾಡುತ್ತಿದ್ದಾರೆ. ಈಗ ಏನೇ ಆರೋಪಗಳು ಮಾಡಿದರೂ ಯಾವುದೇ ಪ್ರಯೋಜನ ಇಲ್ಲ. ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮುಗಿದ ಅಧ್ಯಾಯವಾಗಿದೆ ಎಂದು ಹೇಳಿದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಏಕವಚನದಲ್ಲಿ ಸಂಬೋಧಿಸಬಾರದು. ಅವರು ಪ್ರಧಾನಿಯಾಗಿದ್ದವರು, ಅವರ ಬಗ್ಗೆ ಮಾತನಾಡುವುದಿಲ್ಲ. ರಾಜ್ಯ ಮತ್ತು ದೇಶದ ಪ್ರಮುಖ ನಾಯಕರಾಗಿದ್ದಾರೆ. ಅವರ ಬಗ್ಗೆ ತಮಗೆ ಅಪಾರ ಗೌರವ ಇದೆ ಎಂದರು.