"ಓಟ್ ಬ್ಯಾಂಕ್ ಗಳಿಸುವ ಮತ್ತು ಇನ್ನೊಮ್ಮೆ ಮುಖ್ಯಮಂತ್ರಿ ಆಗುವ ಉದ್ದೇಶದಿಂದ ಜನರನ್ನು ಒಡೆಯುತ್ತಿದ್ದೀರಲ್ಲಾ... ನೀವೆಂಥಾ ಮುಖ್ಯಮಂತ್ರಿ? ಜನರ ಕಷ್ಟಗಳನ್ನು ನಿವಾರಿಸುವಲ್ಲಿ ಆಗಿರುವ ವೈಫಲ್ಯವನ್ನು ಮರೆ ಮಾಚೋಕೆ ಪ್ರತ್ಯೇಕ ಲಿಂಗಾಯತ ಧರ್ಮದ ಕಿಡಿ ಹಚ್ಚಿದ್ದೀರಾ?" ಎಂದು ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಬಾಗಲಕೋಟೆ: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಯ ವಿಚಾರವಾಗಿ ನಡೆಯುತ್ತಿರುವ ವಿವಾದ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಧರ್ಮದ ಹೆಸರಿನಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡಿ ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಮಾಜಿ ಕಾಂಗ್ರೆಸ್ಸಿಗರಾದ ಅವರು ಆರೋಪಿಸಿದ್ದಾರೆ.
"ಓಟ್ ಬ್ಯಾಂಕ್ ಗಳಿಸುವ ಮತ್ತು ಇನ್ನೊಮ್ಮೆ ಮುಖ್ಯಮಂತ್ರಿ ಆಗುವ ಉದ್ದೇಶದಿಂದ ಜನರನ್ನು ಒಡೆಯುತ್ತಿದ್ದೀರಲ್ಲಾ... ನೀವೆಂಥಾ ಮುಖ್ಯಮಂತ್ರಿ? ಜನರ ಕಷ್ಟಗಳನ್ನು ನಿವಾರಿಸುವಲ್ಲಿ ಆಗಿರುವ ವೈಫಲ್ಯವನ್ನು ಮರೆ ಮಾಚೋಕೆ ಪ್ರತ್ಯೇಕ ಲಿಂಗಾಯತ ಧರ್ಮದ ಕಿಡಿ ಹಚ್ಚಿದ್ದೀರಾ?" ಎಂದು ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ. ಇದೇ ವೇಳೆ, ಲಿಂಗಾಯದ ಧರ್ಮದ ವಿಚಾರದಲ್ಲಿ ಜೆಡಿಎಸ್'ನದ್ದು ತಟಸ್ಥ ನಿಲುವು ಎಂದೂ ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.
ಪ್ರಾದೇಶಿಕ ಪಕ್ಷದ ಅಗತ್ಯತೆ ಇದೆ:
ಜೆಡಿಎಸ್ ಪಕ್ಷವನ್ನು ಆತುರಾತುರವಾಗಿ ತಾನು ಸೇರಲಿಲ್ಲ ಎಂದು ಎಚ್.ವಿಶ್ವನಾಥ್ ಹೇಳಿದ್ದಾರೆ. ತಾನು ಕಾಂಗ್ರೆಸ್ ತೊರೆದ ಬಳಿಕ ಬಹಳಷ್ಟು ಯೋಚನೆ ಮಾಡಿ ಜೆಡಿಎಸ್ ಪಕ್ಷವನ್ನು ಸೇರಿದ್ದೇನೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ರಾಜ್ಯದ ಸಮಸ್ಯೆಗಳಿಗೆ ನ್ಯಾಯ ಸಿಗುತ್ತಿಲ್ಲ. ಅನೇಕ ಸಮಸ್ಯೆಗಳ ನಿವಾರಣೆಗೆ ಪ್ರಾದೇಶಿಕ ಪಕ್ಷವೇ ಸೂಕ್ತವೆನಿಸಿದ್ದರಿಂದ ಜೆಡಿಎಸ್ ಸೇರಿದೆ. ಸಂದ್ಯಾಕಾಲದಲ್ಲಿ ಜೆಡಿಎಸ್ ಜೊತೆ ಕೆಲಸ ಮಾಡಬೇಕೆಂದು ಈ ಮೊದಲೇ ಅನಿಸಿತು. ಈಗ ಆ ಕಾಲ ಕೂಡಿ ಬಂದಿತು," ಎಂದು ಹೇಳಿದ ಎಚ್.ವಿಶ್ವನಾಥ್, ಕಾಂಗ್ರೆಸ್'ನಲ್ಲಿದ್ದಂತೆ ಜೆಡಿಎಸ್'ನಲ್ಲೂ ಅಷ್ಟೇ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದಾಗಿ ಅವರು ಜೆಡಿಎಸ್ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.
ಹುಣಸೂರು ಕ್ಷೇತ್ರದ ವಿಚಾರವಾಗಿ ಎಚ್.ಡಿ.ರೇವಣ್ಣನವರ ಪುತ್ರ ಪ್ರಜ್ವಲ್ ತೋರಿದ ಬಂಡಾಯದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮೈಸೂರಿನ ಮಾಜಿ ಸಂಸದ ವಿಶ್ವನಾಥ್, ಆತ ಇನ್ನೂ ಬಿಸಿರಕ್ತದ ಹುಡುಗ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ.
- ಮಲ್ಲಿಕಾರ್ಜುನ ಹೊಸಮನಿ, ಸುವರ್ಣನ್ಯೂಸ್, ಬಾಗಲಕೋಟೆ
