ತಾನು ಮಾರ್ಚ್'ನಲ್ಲಿ ನಡೆಯಲಿರುವ ಪ್ರತಿಭಟನೆಯಿಂದ ಹಿಂದೆ ಸರಿದರೂ, ಇತರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ನವದೆಹಲಿ(ಫೆ. 28): ದಿಲ್ಲಿ ಯೂನಿವರ್ಸಿಟಿ ಕ್ಯಾಂಪಸ್ ಗಲಾಟೆಯ ಹೊಸ ವಿವಾದದ ಕೇಂದ್ರಬಿಂದುವಾಗಿರುವ ಕಾಲೇಜು ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಈಗ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಯಿಂದ ಹಿಂದೆ ಸರಿದಿದ್ದಾರೆ. ತನಗೆ ಇದೆಲ್ಲಾ ಸಾಕಾಗಿಬಿಟ್ಟಿದೆ. ಇದಕ್ಕಿಂತ ಹೆಚ್ಚು ತಾಳಲು ಆಗುವುದಿಲ್ಲ ಎಂದು ಹೇಳಿರುವ ಆಕೆ, ತನ್ನನ್ನು ಏಕಾಂತದಲ್ಲಿ ಬಿಡುವಂತೆ ಕೋರಿಕೊಂಡಿದ್ದಾರೆ. ತಾನು ಭಯಪಟ್ಟು ಈ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿರುವ ಆಕೆ, ತನಗಿರುವ ಧೈರ್ಯವನ್ನ ಈಗಾಗಲೇ ಸಾಬೀತುಪಡಿಸಿರುವುದಾಗಿ ಹೇಳಿದ್ದಾರೆ.
ಆದರೆ, ತಾನು ಮಾರ್ಚ್'ನಲ್ಲಿ ನಡೆಯಲಿರುವ ಪ್ರತಿಭಟನೆಯಿಂದ ಹಿಂದೆ ಸರಿದರೂ, ಇತರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ಇದೇ ಮಾರ್ಚ್'ನಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು "ದಿಲ್ಲಿ ಯೂನಿವರ್ಸಿಟಿ ಉಳಿಸಿ" ಪ್ರತಿಭಟನಾ ರ್ಯಾಲಿ ನಡೆಸಲಿದ್ದಾರೆ. ದಿಲ್ಲಿ ವಿವಿ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ ಈ ಪ್ರತಿಭಟನೆ ನಡೆಯುತ್ತಿದೆ.
ಕಾರ್ಗಿಲ್ ಯುದ್ಧದ ಹುತಾತ್ಮ ಯೋಧರೊಬ್ಬರ ಪುತ್ರಿಯಾದ 20 ವರ್ಷದ ಈ ಗುರ್ಮೆಹರ್ ಕೌರ್ ದಿಲ್ಲಿಯ ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿ. ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿ ಸಂಬಂಧ ಬೆಳೆಯಬೇಕು ಎಂಬ ಸಂದೇಶವಿರುವ ವಿಡಿಯೋವೊಂದರಲ್ಲಿ ಗುರ್ಮೆಹರ್ ಕೌರ್ ಅವರು, "ನನ್ನ ತಂದೆಯನ್ನು ಕೊಂದದ್ದು ಯುದ್ಧವೇ ಹೊರತು ಪಾಕಿಸ್ತಾನವಲ್ಲ. ಕಾರ್ಗಿಲ್ ಯುದ್ಧವಾಗದೇ ಹೋಗಿದ್ದರೆ ತಂದೆ ಬದುಕುತ್ತಿದ್ದರು" ಎಂದು ಅಭಿಪ್ರಾಯಪಟ್ಟಿದ್ದರು. ಆದರೆ, "ನನ್ನ ತಂದೆಯನ್ನು ಕೊಂದದ್ದು ಯುದ್ಧವೇ ಹೊರತು ಪಾಕಿಸ್ತಾನವನ್ನ" ಎಂಬ ಸಂದೇಶವಿರುವ ಫಲಕವನ್ನು ಆಕೆ ಹಿಡಿದುಕೊಂಡಿರುವ ಚಿತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಕ್ಕೆ ಟ್ರೋಲ್ ಆಗಿದೆ. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ನಟ ರಣದೀಪ್ ಹೂಡಾ, ಕೇಂದ್ರ ಸಚಿವ ಕಿರಣ್ ರಿಜಿಜು ಮೊದಲಾದ ಪ್ರಮುಖರು ಈಕೆಯ ವಿರುದ್ಧ ಸಿಡಿದೆದ್ದು ಟ್ವೀಟ್ ಮಾಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ತನ್ನ ಮೇಲೆ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ ಎಂದು ಗುರ್ಮೆಹರ್ ಕೌರ್ ಆರೋಪಿಸಿದ್ದರು. ಕೇಜ್ರಿವಾಲ್ ಸೇರಿದಂತೆ ಸಾಕಷ್ಟು ಜನರೂ ಈಕೆಯ ಬೆಂಬಲಕ್ಕೆ ನಿಂತಿರುವುದು ವಿಶೇಷ.
