ಅಹಮದಾಬಾದ್‌[ಸೆ.29]: ವಾಹನ ಕಾಯ್ದೆಯಲ್ಲಿ ತರಲಾಗಿರುವ ಬದಲಾವಣೆಯಿಂದಾಗಿ ದೇಶದ ಬಹುತೇಕ ಕಡೆಗಳಲ್ಲಿ ವಾಹನ ಸವಾರರು ಒಂದಲ್ಲ ಒಂದು ರೀತಿಯಿಂದ ಸವಾಲು ಎದುರಿಸುತ್ತಿದ್ದಾರೆ. ಗುಜರಾತ್‌ನಲ್ಲಿ ರಿಕ್ಷಾ ಚಾಲಕರೊಬ್ಬರು 18,000 ದಂಡ ಕಟ್ಟಲು ಸಾಧ್ಯವಾಗದೇ ಪಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಅಹಮದಾಬಾದ್‌ನಲ್ಲಿ ಸಂಭವಿಸಿದೆ.

ರಾಜು ಸೋಳಂಕಿ ಎಂಬುವರೇ ಭಾರೀ ದಂಡಕ್ಕೆ ಹೆದರಿ ಆತ್ಮಹತ್ಯೆಗೆ ಮುಂದಾದ ರಿಕ್ಷಾ ಚಾಲಕ. ಗಂಭೀರ ಸ್ಥಿತಿಯಲ್ಲಿರುವ ಚಾಲಕ ರಾಜು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ತೀರ ಬಡತನ ಎದುರಿಸುತ್ತಿರುವ ರಾಜು ಅವರು ರಿಕ್ಷಾ ಬಾಡಿಗೆ ಹಣದಿಂದಲೇ ಜೀವನ ಸಾಗಿಸುತ್ತಿದ್ದು, ದೊಡ್ಡ ಮೊತ್ತದ ದಂಡ ಕಟ್ಟಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾಲಕ ರಾಜು, ‘ನನ್ನ ರಿಕ್ಷಾವನ್ನು ಜಪ್ತಿ ಮಾಡಿಕೊಂಡಿದ್ದಾರೆ. ರಿಕ್ಷಾ ಓಡಿಸದೇ ನನಗೆ ಬೇರಿನ್ನಾವುದೇ ಮೂಲದಿಂದ ಆದಾಯ ಬರುವುದಿಲ್ಲ. ನಾನು ಬಿ.ಕಾಂ ಓದಿದ್ದೇನೆ. ಆದರೆ ಬೇರೆ ಯಾವುದೇ ಕೆಲಸ ಸಿಗದ ಕಾರಣ ರಿಕ್ಷಾ ಓಡಿಸುತ್ತಿದ್ದೇನೆ’ ಎನ್ನುತ್ತಾರೆ.