ದೇಶ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಗುಜರಾತ್‌ ಚುನಾವಣೆಗೆ ಅಖಾಡ ಸಜ್ಜಾಗಿದೆ. ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. 182 ಕ್ಷೇತ್ರಗಳಲ್ಲಿ ನಾಳೆ  84 ಕ್ಷೇತ್ರಗಳ ಮತದಾನ ನಡೆಯಲಿದೆ.  ಸಿಎಂ ವಿಜಯ್‌ ರೂಪಾನಿ ಸೇರಿದಂತೆ ಹಲವು ಘಟಾನುಘಟಿ ನಾಯಕರ ಹಣೆಬರಹ ಮೊದಲ ಹಂತದಲ್ಲಿ ನಿರ್ಧಾರವಾಗಲಿದೆ.

ಗಾಂಧಿನಗರ(ಡಿ.8): ದೇಶ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಗುಜರಾತ್‌ ಚುನಾವಣೆಗೆ ಅಖಾಡ ಸಜ್ಜಾಗಿದೆ. ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. 182 ಕ್ಷೇತ್ರಗಳಲ್ಲಿ ನಾಳೆ 84 ಕ್ಷೇತ್ರಗಳ ಮತದಾನ ನಡೆಯಲಿದೆ. ಸಿಎಂ ವಿಜಯ್‌ ರೂಪಾನಿ ಸೇರಿದಂತೆ ಹಲವು ಘಟಾನುಘಟಿ ನಾಯಕರ ಹಣೆಬರಹ ಮೊದಲ ಹಂತದಲ್ಲಿ ನಿರ್ಧಾರವಾಗಲಿದೆ. ಡಿ.14ರಂದು 2ನೇ ಹಂತದ ಮತದಾನ ನಡೆಯಲಿದೆ.

ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಮತ ಸಮರದಲ್ಲಿ, ಆಡಳಿತ ವಿರೋಧಿ ಅಲೆಯ ವಿರುದ್ಧ ಈಜಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಉಳಿಸಿಕೊಳ್ಳುವುದು ಕಮಲ ಪಾಳಯದ ಸವಾಲಾಗಿದೆ. ಪ್ರಧಾನಿ ಮೋದಿಯ ತವರು ರಾಜ್ಯದ ಚುನಾವಣೆಯಾಗಿರುವುದರಿಂದ ಬಿಜೆಪಿಗೆ ಮತ್ತಷ್ಟು ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಹಾಗಾಗಿ ಪ್ರಧಾನಿ ಮೋದಿ ತಾವು ನಡೆಸಿದ ಒಟ್ಟು 14 ಪ್ರಚಾರಗಳಲ್ಲೂ ಬಿಜೆಪಿ ಸರಕಾರದ ಅಭಿವೃದ್ಧಿ ಮತ್ತು ಆರ್ಥಿಕ ನೀತಿಗಳ ಕುರಿತು ಬೆನ್ನುತಟ್ಟಿಕೊಳ್ಳುವುದರ ಜತೆಗೆ ಗುಜರಾತ್‌ ಅಸ್ಮಿತೆಯನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾರೆ. ಮತ್ತೊಂದೆಡೆ, ಜಿಎಸ್‌ಟಿ, ನೋಟ್​​​ ಬ್ಯಾನ್​​​​​​​​​​​​​​ ಅನ್ನು ಬಿಜೆಪಿ ವಿರುದ್ಧ ಪ್ರತಿ ಅಸ್ತ್ರಗಳಾಗಿ ಕಾಂಗ್ರೆಸ್‌ ಪ್ರಯೋಗ ಮಾಡಿದೆ. ಜತೆಗೆ, ಪಾಟಿದಾರ ಮೀಸಲು ಹೋರಾಟಗಾರ ಹಾರ್ದಿಕ್‌ ಪಾಟಿಲ್‌, ದಲಿತ ಮುಖಂಡ ಜಿಗ್ನೇಶ್‌ ಮೇವಾನಿ, ಒಬಿಸಿ ಮುಖಂಡ ಅಲ್ಪೇಶ್‌ ಠಾಕೂರ್‌ ಅವರ ಬೆಂಬಲವನ್ನೂ ಗಿಟ್ಟಿಸುವ ಮೂಲಕ ಕಾಂಗ್ರೆಸ್‌ ನಾಯಕರು ಆಡಳಿತ ಬಿಜೆಪಿಯನ್ನು ಮಣಿಸಲು ಕಸರತ್ತು ನಡೆಸಿದ್ದಾರೆ.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಒಟ್ಟು 7 ದಿನಗಳ ಕಾಲ ಗುಜರಾತ್‌ನಲ್ಲಿ ಪ್ರಚಾರ ನಡೆಸಿದ್ದು, ದೇಗುಲಗಳಿಗೆ ಭೇಟಿ ನೀಡುವ ಮೂಲಕ ಹಿಂದೂಗಳ ಮತ ಸೆಳೆಯುವ ಯತ್ನವನ್ನೂ ಮಾಡಿದ್ದಾರೆ. ಇವೆಲ್ಲವುಗಳ ಜತೆಗೆ, ನಾಯಕರ ವಾಕ್‌ ಪ್ರಹಾರಗಳು, ಟ್ವೀಟ್‌ ವಾರ್‌ಗಳು, ಮೀಸಲು ಜಟಾಪಟಿ, ಹಾರ್ದಿಕ್‌ ಪಟೇಲ್‌ ಸೆಕ್ಸ್‌ ಸಿ.ಡಿ ಪ್ರಕರಣ, ರಾಹುಲ್‌ ಗಾಂಧಿ ಧರ್ಮದ ವಿವಾದಗಳಿಗೆ ಗುಜರಾತ್‌ ಚುನಾವಣಾ ಕಣ ಸಾಕ್ಷಿಯಾಗಿದೆ. ಮತದಾರರ ಅಸಲಿ ತೀರ್ಪು ತಿಳಿಯಲು ಡಿ.18ರವರೆಗೆ ಕಾಯಲೇಬೇಕಿದೆ.