ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ನಡೆಯುತ್ತಿದ್ದ ಹೈಡ್ರಾಮಾ ಕೊನೆಗೂ ತೆರೆ ಕಂಡಿದೆ. ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಹ್ಮದ್ ಪಟೇಲ್ ಜಯಭೇರಿ ಭಾರಿಸುವ ಮೂಲಕ ಸತತ 5ನೇ ಬಾರಿ ರಾಜ್ಯಸಭೆಗೆ ಪ್ರವೇಶಿಸಿದ್ದಾರೆ.
ಅಹ್ಮದಾಬಾದ್(ಆ. 9): ಭಾರೀ ಕುತೂಹಲ ಮೂಡಿಸಿದ್ದ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ್ದಾರೆ. ಸೋನಿಯಾ ಗಾಂಧಿ ಆಪ್ತ ಹಾಗೂ ರಾಜಕೀಯ ಕಾರ್ಯದರ್ಶಿಯಾಗಿರೋ ಅಹ್ಮದ್ ಪಟೇಲ್ ಅವರು ಬಿಜೆಪಿಯ ಬಲವಂತ ಸಿನ್ಹಾ ರಜಪೂತ್ ವಿರುದ್ಧ ಗೆಲುವು ಸಾಧಿಸಿ ಸತತ 5ನೇ ಬಾರಿ ರಾಜ್ಯಸಭೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ್ದೆ ತಡ ಗುಜರಾತ್ ವಿಧಾನಸಭೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.
ಬಿಜೆಪಿಗೆ ತೀವ್ರ ಮುಖಭಂಗ:
ತವರು ರಾಜ್ಯ ಗುಜರಾತ್'ನಲ್ಲೇ ಪ್ರಧಾನಿ ನರೇಂದ್ರ ಮೋದಿಗೆ ಭಾರೀ ಹಿನ್ನಡೆಯಾಗಿದೆ. ಮೂರೂ ಸ್ಥಾನಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಬೇಕೆಂಬ ಬಿಜೆಪಿಯ ಹವಣಿಕೆ ವರ್ಕೌಟ್ ಆಗಲಿಲ್ಲ. ಸೋನಿಯಾ ಗಾಂಧಿಗೆ ಆಪ್ತರಾಗಿರುವ ಅಹಮ್ಮದ್ ಪಟೇಲ್'ರನ್ನು ಹೇಗಾದರೂ ಮಾಡಿ ಸೋಲಿಸಿ ಗುಜರಾತ್ ಚುನಾವಣೆಗೂ ಮುನ್ನ ಕಾಂಗ್ರೆಸ್'ಗೆ ಮರ್ಮಾಘಾತ ಕೊಡಬೇಕೆಂದು ಪ್ರಯತ್ನ ಪಟ್ಟಿದ್ದ ಮೋದಿ ಮತ್ತು ಷಾಗೆ ತೀವ್ರ ಮುಖಭಂಗವಾಗಿದೆ.
ಅಲ್ಲದೇ ಈ ಚುನಾವಣೆಯಲ್ಲಿ ಬಿಜೆಪಿಗೂ ಅಡ್ಡ ಮತದಾನದ ಬಿಸಿ ತಟ್ಟಿದೆ. ಮತಎಣಿಕೆ ಕೇಂದ್ರದಲ್ಲಿ ಹೈಡ್ರಾಮಾ ನಡೆದಿದ್ದು ಇಬ್ಬರು ಕಾಂಗ್ರೆಸ್ ಶಾಸಕರಾದ ರಾಘವ್ ಭಾಯ್ ಪಟೇಲ್, ಬೋಲಾಬಾಯಿ ಬೋಹಿಲ್ ತಮ್ಮ ಮತಪತ್ರಗಳನ್ನು ಅಮಿತ್ ಶಾಗೆ ತೋರಿಸಿದ್ದಾರೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಕಾಂಗ್ರೆಸ್ ನಿಯೋಗ ಕೇಂದ್ರ ಚುನಾವಣಾ ಆಯೋಗದ ಕಛೇರಿಗೆ ತೆರಳಿ ಮನವಿ ಸಲ್ಲಿಸಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿಯೂ ಕೂಡ ನಿಯೋಗವನ್ನು ಕಳುಹಿಸಿಕೊಟ್ಟಿತ್ತು. ಬಳಿಕ ಕೇಂದ್ರ ಚುನಾವಣಾ ಆಯೋಗ ಕಾಂಗ್ರೆಸ್ ಶಾಸಕರ ಮತಗಳನ್ನು ಅಸಿಂಧುಗೊಳಿಸಿ ತೀರ್ಪನ್ನು ನೀಡಿತು.
ಬಿಜೆಪಿಯ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಗೆಲುವು ಸಾಧಿಸಿ ರಾಜ್ಯಸಭೆಗೆ ಆಯ್ಕೆಯಾದರಾದರೂ ಸೋನಿಯಾ ಆಪ್ತ ಅಹ್ಮದ್ ಪಟೇಲ್'ರನ್ನು ಗೆಲ್ಲುವ ಪ್ರಮುಖ ಗುರಿ ಈಡೇರದ ಹಿನ್ನೆಲೆಯಲ್ಲಿ ಬಿಜೆಪಿಗೆ ನಿರಾಸೆಯಾಗಿದೆ. ಅಮಿತ್ ಶಾ ಮತ್ತು ಮೋದಿ ಗೆದ್ದೂ ಸೋತಂತಾಗಿದ್ದಾರೆ.
ಒಟ್ನಲ್ಲಿ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು ಬಿಜೆಪಿಗೆ ಮುಜುಗರ ಉಂಟು ಮಾಡಿದೆ.
- ಗುರುಪ್ರಸಾದ್ ಎನ್.ಜೆ., ನ್ಯೂಸ್ ಡೆಸ್ಕ್, ಸುವರ್ಣನ್ಯೂಸ್
