ಅಹಮದಾಬಾದ್‌ (ಮಾ. 10):  ಊರು ಗೆದ್ದು ಮಾರು ಗೆಲ್ಲು ಎಂಬ ಮಾತಿದೆ. ಅದರಂತೆ ಸ್ವಂತ ಊರು ಗುಜರಾತನ್ನು ಗೆದ್ದು ದಿಲ್ಲಿ ಗದ್ದುಗೆ ಗೆಲ್ಲಲು ಹೋದವರು ನರೇಂದ್ರ ಮೋದಿ. ಅದರಲ್ಲಿ ಯಶಸ್ವಿಯೂ ಆದರು. ಅದರ ಜೊತೆಗೇ ತವರು ರಾಜ್ಯ ಗುಜರಾತಿನ 26ಕ್ಕೆ 26 ಸೀಟುಗಳನ್ನೂ 2014ರ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು.

ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ರಾಜ್ಯವಿದು. ಆ ಪಕ್ಷಕ್ಕೆ ತನ್ನ ಕೋಟೆಯಲ್ಲಿ ತಾನೇ ಅನಾಥನಾಗುವ ಸ್ಥಿತಿ ಕಳೆದ ಚುನಾವಣೆಯಲ್ಲಿ ಬಂದಿತ್ತು. ಈ ಬಾರಿ?

ಹಿಂದಿನಂತೆ ಬಿಜೆಪಿ ಬಿಟ್ಟುಕೊಡಲು ಸಿದ್ಧನಿಲ್ಲ, ಕಾಂಗ್ರೆಸ್‌ ಸಂಪೂರ್ಣ ಕಳೆದುಕೊಳ್ಳಲೂ ಸಿದ್ಧನಿಲ್ಲ. ಮೇಲಾಗಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ತವರು ರಾಜ್ಯವಿದು. ಹೀಗಾಗಿ ಗುಜರಾತನ್ನು ಗೆಲ್ಲುವುದು ಅವರಿಬ್ಬರಿಗೆ ಪ್ರತಿಷ್ಠೆಯ ಪ್ರಶ್ನೆ ಕೂಡ. ಆದರೆ, ಕಾಂಗ್ರೆಸ್‌ಗೆ ಎರಡು ವರ್ಷದ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಸಾಧನೆಯಿಂದ ಹೊಸ ಹುರುಪು ಬಂದಿದೆ. ಅದಕ್ಕಿಂತ ಹಿಂದಿನ ಮೂರು ಅವಧಿಯಲ್ಲಿ ವಿಧಾನಸಭೆ ಚುನಾವಣೆಗಳಲ್ಲಿ ಮೋದಿಯೆದುರು ಧೂಳೀಪಟವಾಗುತ್ತಿದ್ದ ಕಾಂಗ್ರೆಸ್‌ ಪಕ್ಷ ಕಳೆದ ವಿಧಾನಸಭೆ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದು, ಬಹುಮತಕ್ಕೆ ಕೇವಲ 15 ಸೀಟುಗಳಷ್ಟುಕಡಿಮೆ ಪಡೆದಿತ್ತು.

ಬಿಜೆಪಿ ಆ ವಿಧಾನಸಭೆ ಚುನಾವಣೆಯಲ್ಲಿ ತಿಣುಕಾಡಿ ಗೆದ್ದಿತ್ತು. ಆ ಆತ್ಮವಿಶ್ವಾಸದಿಂದಲೇ ಕಾಂಗ್ರೆಸ್‌ ಈ ಬಾರಿ ಮಿಷನ್‌ 50% ಗುರಿ ಹಾಕಿಕೊಂಡು, 26ರಲ್ಲಿ 13 ಸ್ಥಾನಗಳನ್ನು ಗೆಲ್ಲಲು ರಣತಂತ್ರ ಹೂಡಿದೆ. ಮೋದಿ-ಅಮಿತ್‌ ಶಾ ಆಟದ ಮುಂದೆ ಆ ರಣತಂತ್ರದ ಕತೆ ಏನಾಗುತ್ತದೆ ಎಂಬುದನ್ನು ನೋಡಬೇಕಷ್ಟೆ.

30 ವರ್ಷದ ಹಿಂದಿನವರೆಗೆ ಗುಜರಾತ್‌ ರಾಜ್ಯ ಕಾಂಗ್ರೆಸ್ಸಿನ ಸುಲಭ ಆಡುಂಬೊಲವಾಗಿತ್ತು. 1991ರ ನಂತರ ಈ ರಾಜ್ಯದಲ್ಲಿ ಪ್ರತಿ ಬಾರಿ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತ ಬಂದಿದೆ. ಅದರಂತೆ ಈ ಬಾರಿಯೂ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಪೈಪೋಟಿಯಿದೆ.

ಸ್ವತಂತ್ರ ಪಾರ್ಟಿ, ಪ್ರಜಾ ಸೋಷಲಿಸ್ಟ್‌ ಪಕ್ಷ, ಜನತಾ ಪಾರ್ಟಿ, ಜನತಾ ದಳ, ಗುಜರಾತ್‌ ಜನತಾದಳ, ಬಿಟಿಪಿ, ಎನ್‌ಸಿಪಿ, ಉಂಝಾ ಕಾಂಗ್ರೆಸ್‌ ಮುಂತಾದ ಪಕ್ಷಗಳಿವೆಯಾದರೂ ಲೋಕಸಭೆ ಚುನಾವಣೆಗೆ ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ.

ಗಮನಾರ್ಹ ಸಂಗತಿಯೆಂದರೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಸಾಮರ್ಥ್ಯಕ್ಕೆ ಮೊದಲ ಮನ್ನಣೆ ತಂದುಕೊಟ್ಟರಾಜ್ಯವೂ ಗುಜರಾತ್‌. 2014ರಲ್ಲಿ ದೇಶದಲ್ಲಿ ಮೋದಿ ಪ್ರವರ್ಧಮಾನಕ್ಕೆ ಬಂದ ನಂತರ ಒಂದಾದ ಮೇಲೊಂದು ಚುನಾವಣೆಯನ್ನು ಸೋಲುತ್ತ ನೆಲಕಚ್ಚಿದ್ದ ಕಾಂಗ್ರೆಸ್‌ಗೆ ಎರಡು ವರ್ಷದ ಹಿಂದೆ ಮೊದಲ ಆಶಾಕಿರಣ ಗೋಚರಿಸಿದ್ದೇ ಗುಜರಾತ್‌ನ ವಿಧಾನಸಭೆ ಚುನಾವಣೆಯಲ್ಲಿ. ಸೋತರೂ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಮೂಲಕ ರಾಹುಲ್‌ ಮೊದಲ ಬಾರಿ ತಮ್ಮ ಶಕ್ತಿ ಪ್ರದರ್ಶಿಸಿದ್ದರು.

ನಂತರ ಹಿಂದಿ ಹೃದಯ ಭಾಗದ ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸಿ ಮೋದಿ-ಶಾ ಜೋಡಿಗೆ ಮೊದಲ ತ್ರಿವಳಿ ಸೋಲಿನ ಆಘಾತ ನೀಡಿದ್ದರು. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ಗೂ ಗುಜರಾತ್‌ ಪ್ರತಿಷ್ಠೆಯ ಕಣವೇ.

2014ರಲ್ಲಿ ಏನಾಗಿತ್ತು:

ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ 26ಕ್ಕೆ 26 ಲೋಕಸಭೆ ಕ್ಷೇತ್ರಗಳನ್ನೂ ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್‌ ಶೂನ್ಯ ಸಂಪಾದನೆ ಮಾಡಿ ಭಾರಿ ಮುಖಭಂಗ ಅನುಭವಿಸಿತ್ತು. ಅದಕ್ಕಿಂತ ಹಿಂದಿನ ಎರಡು ಚುನಾವಣೆಗಳಲ್ಲಿ ರಾಜ್ಯದಲ್ಲಿ ಬಿಜೆಪಿಯೇ ಅತಿಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ ಕಾಂಗ್ರೆಸ್‌ ಪಕ್ಷ ಕ್ರಮವಾಗಿ 11 ಮತ್ತು 12 ಸ್ಥಾನಗಳನ್ನು ಗೆದ್ದಿತ್ತು.

ಈಗಿನ ಚಿತ್ರಣ ಏನು:

ಕಳೆದ ಐದು ವರ್ಷದಲ್ಲಿ ನರ್ಮದೆಯಲ್ಲಿ ಸಾಕಷ್ಟುನೀರು ಹರಿದಿದೆ. ಬಿಜೆಪಿಗೆ ಇದು ಅನಾಯಾಸ ರಾಜ್ಯವೇನೂ ಅಲ್ಲ. ಬಿಜೆಪಿಯ ಪ್ರಮುಖ ವೋಟ್‌ಬ್ಯಾಂಕ್‌ ಆಗಿರುವ ಪಟೇಲ್‌ ಸಮುದಾಯದಲ್ಲಿ ಮೀಸಲಾತಿ ಹೋರಾಟದ ಮೂಲಕ ಹಾರ್ದಿಕ್‌ ಪಟೇಲ್‌ ಎಂಬ ಯುವ ಪ್ರಖರ ನಾಯಕ ಉದಯಿಸಿದ್ದಾನೆ. ಆತ ಈ ಬಾರಿ ಕಾಂಗ್ರೆಸ್‌ನಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆಯಿದೆ.

ನಾಲ್ಕೈದು ವರ್ಷಗಳಿಂದ ಮೀಸಲು ಕೇಳುತ್ತಿರುವ ಪಟೇಲರಿಗೆ ಇನ್ನೂ ಅದು ಸಿಕ್ಕಿಲ್ಲ. ಅದರ ಬದಲಿಗೆ ಮೇಲ್ವರ್ಗದ ಬಡವರಿಗೆ ಶೇ.10ರಷ್ಟುಮೀಸಲು ನೀಡುವ ಕೇಂದ್ರ ಸರ್ಕಾರದ ಯೋಜನೆಯನ್ನು ಮೊಟ್ಟಮೊದಲ ರಾಜ್ಯವಾಗಿ ಗುಜರಾತ್‌ ಇತ್ತೀಚೆಗೆ ಜಾರಿಗೊಳಿಸಿದೆ. ಇದನ್ನು ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಪಟೇಲರು ಹೇಗೆ ಸ್ವೀಕರಿಸುತ್ತಾರೆಂಬುದನ್ನು ಲೋಕಸಭೆ ಚುನಾವಣೆಯಲ್ಲಿ ನೋಡಬೇಕು.

ಗುಜರಾತ್‌ ವ್ಯಾಪಾರಿಗಳ ರಾಜ್ಯ. ಮೋದಿಯವರ ಅಪನಗದೀಕರಣದಿಂದ ಅತಿದೊಡ್ಡ ಹೊಡೆತ ತಿಂದವರು ಗುಜರಾತಿನ ವ್ಯಾಪಾರಿಗಳು, ಅದರಲ್ಲೂ ವಿಶೇಷವಾಗಿ ಇಲ್ಲಿನ ವಜ್ರದ ವ್ಯಾಪಾರಿಗಳು. ಜಿಎಸ್‌ಟಿಯಿಂದ ಹೊಡೆತ ತಿಂದವರೂ ಇವರೇ. ಇನ್ನು, ರಾಜ್ಯದಲ್ಲಿ ಇತ್ತೀಚೆಗೆ ರೈತರ ಸಮಸ್ಯೆ ತೀವ್ರಗೊಂಡಿದೆ. ನೀರಿನ ಸಮಸ್ಯೆ ಕೂಡ ಹೆಚ್ಚಾಗಿದೆ. ಇವೆಲ್ಲವೂ ಚುನಾವಣೆಯಲ್ಲಿ ನಿರ್ಣಾಯಕ ವಿಷಯಗಳಾಗಬಹುದು.

ಮೋದಿ ಮತ್ತೆ ಸ್ಪರ್ಧಿಸ್ತಾರಾ?

2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ವಡೋದರಾ ಹಾಗೂ ಉತ್ತರ ಪ್ರದೇಶದ ವಾರಾಣಸಿಯಿಂದ ಸ್ಪರ್ಧಿಸಿದ್ದರು. ನಂತರ ವಡೋದರಾ ಕ್ಷೇತ್ರ ತ್ಯಜಿಸಿ ವಾರಾಣಸಿ ಉಳಿಸಿಕೊಂಡಿದ್ದರು. ಈ ಬಾರಿಯೂ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಲು ಅಥವಾ ಸುರಕ್ಷಾ ಕ್ರಮವಾಗಿ ರಾಜ್ಯದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಮೋದಿ ಸ್ಪರ್ಧಿಸಿದರೆ ಅಚ್ಚರಿಯಿಲ್ಲ.

ಅಡ್ವಾಣಿಗೆ ಟಿಕೆಟ್‌ ಚಿಂತೆ!

ಬಿಜೆಪಿಯ ಭೀಷ್ಮ ಎಲ್‌.ಕೆ.ಅಡ್ವಾಣಿ 6 ಬಾರಿ ಗೆದ್ದಿರುವ ಲೋಕಸಭಾ ಕ್ಷೇತ್ರ ಗುಜರಾತ್‌ನ ಗಾಂಧಿನಗರ. ಕಳೆದ ಚುನಾವಣೆಯಲ್ಲೇ ಅವರು ಈ ಕ್ಷೇತ್ರಕ್ಕೆ ಸ್ವತಃ ‘ಕೇಳಿ’ ಟಿಕೆಟ್‌ ಪಡೆದುಕೊಳ್ಳುವಂತಾಗಿತ್ತು. ಈ ಬಾರಿ 91ನೇ ಇಳಿವಯಸ್ಸಿನಲ್ಲಿರುವ ಅವರಿಗೆ ಮತ್ತೆ ಟಿಕೆಟ್‌ ಸಿಗುತ್ತದೆಯೇ ಎಂಬುದು ಸದ್ಯಕ್ಕೆ ಸಸ್ಪೆನ್ಸ್‌. 75 ವರ್ಷ ದಾಟಿದವರನ್ನು ಸಕ್ರಿಯ ರಾಜಕಾರಣದಿಂದ ದೂರವಿಡುವ ಬಿಜೆಪಿಯ ಅಲಿಖಿತ ನಿಯಮ ಈ ಬಾರಿ ಜಾರಿಗೆ ಬಂದರೆ ಮೊದಲೇ ಪಕ್ಷದಲ್ಲಿ ತೆರೆಮರೆಗೆ ಸರಿದಿರುವ ಅಡ್ವಾಣಿಗೆ ಟಿಕೆಟ್‌ ಸಿಗುವುದು ಕಷ್ಟ.

ಆಡಳಿತಾರೂಢ ಪಕ್ಷ: ಬಿಜೆಪಿ

ಲೋಕಸಭೆ ಸ್ಥಾನಗಳ ಸಂಖ್ಯೆ: 26

ಹಾಲಿ ಲೋಕಸಭೆ ಸದಸ್ಯರು:

ಬಿಜೆಪಿ-26, ಕಾಂಗ್ರೆಸ್‌-0, ಇತರರು-0

ಮತದಾರರ ಸಂಖ್ಯೆ: 4.47 ಕೋಟಿ

2014ರ ಮತದಾನ: ಶೇ.62.4

ವಿಧಾನಸಭೆ ಕ್ಷೇತ್ರಗಳು: 182

ಹಾಲಿ ವಿಧಾನಸಭೆ ಸದಸ್ಯರು:

ಬಿಜೆಪಿ-100, ಕಾಂಗ್ರೆಸ್‌-74, ಇತರರು-6

ಪ್ರಮುಖ ಚುನಾವಣಾ ವಿಷಯ

ರೈತರ ಸಮಸ್ಯೆ, ನೀರು, ಮೀಸಲಾತಿ, ಅಪನಗದೀಕರಣ, ಜಿಎಸ್‌ಟಿ

ಪ್ರಮುಖ ಕ್ಷೇತ್ರಗಳು

ಗಾಂಧಿನಗರ, ವಡೋದರ, ಸಾಬರಕಾಂಠಾ, ಸೂರತ್‌, ಭಾವನಗರ, ನವಸಾರಿ, ರಾಜಕೋಟ್‌, ಜಾಮ್‌ನಗರ, ಕಛ್‌, ಜುನಾಗಢ, ಭರೂಚ್‌, ಬನಾಸಕಾಂಠಾ, ಪೋರಬಂದರ್‌, ಆನಂದ್‌, ಗೋಧ್ರಾ, ಅಹಮದಾಬಾದ್‌

ಪ್ರಮುಖ ಸಂಭಾವ್ಯ ಅಭ್ಯರ್ಥಿಗಳು

ಎಲ್‌.ಕೆ.ಅಡ್ವಾಣಿ

ಹಾರ್ದಿಕ್‌ ಪಟೇಲ್‌

ಅಮಿತ್‌ ಚಾವ್ಡಾ