ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ತಮಗೆ ಮಹತ್ವದ ಖಾತೆ ನೀಡಿಲ್ಲ ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮುನಿಸಿಕೊಂಡಿದ್ದು, ಕಚೇರಿಯಿಂದ ದೂರವೇ ಉಳಿದಿದ್ದಾರೆ.

ಅಹಮದಾಬಾದ್: ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ತಮಗೆ ಮಹತ್ವದ ಖಾತೆ ನೀಡಿಲ್ಲ ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮುನಿಸಿಕೊಂಡಿದ್ದು, ಕಚೇರಿಯಿಂದ ದೂರವೇ ಉಳಿದಿದ್ದಾರೆ. ಅಲ್ಲದೇ ತಮಗೆ 3 ದಿನದಲ್ಲಿ ಸೂಕ್ತ ಖಾತೆ ನೀಡದೇ ಹೋದಲ್ಲಿ ಸಚಿವ ಸ್ಥಾನ ತ್ಯಜಿಸುವ ಬೆದರಿಕೆ ಹಾಕಿದ್ದಾರೆ. ಇದರೊಂದಿಗೆ ಗುಜರಾತ್ ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಗೊಂಡಂತಾಗಿದೆ.

ಹಿಂದೆ ನಿತಿನ್ ಪಟೇಲ್ ಹೊಂದಿದ್ದ ಹಣಕಾಸು, ನಗರಾಭಿವೃದ್ಧಿ ಸೇರಿ ಹಲವು ಪ್ರಮುಖ ಖಾತೆಗಳನ್ನು ಅವರಿಂದ ಕಿತ್ತುಕೊಳ್ಳಲಾಗಿದೆ. ಹೀಗಾಗಿ ಸಿಡಿದೆದ್ದಿರುವ ಅವರು, ಅವುಗಳಿಗಾಗಿ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಪಕ್ಷದ ಹಲವು ಹಿರಿಯ ನಾಯಕರ ಎದುರೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಇನ್ನು ಮೂರು ದಿನದಲ್ಲಿ ಸೂಕ್ತ ಖಾತೆ ಸಿಗದೇ ಹೋದಲ್ಲಿ ಸಚಿವ ಸ್ಥಾನ ತ್ಯಜಿಸುವ ಬೆದರಿಕೆ ಹಾಕಿದ್ದಾರೆ. ಈ ನಡುವೆ ತಮ್ಮ ಭಿನ್ನಮತದ ಕುರಿತು ಪ್ರತಿಕ್ರಿಯಿಸಿರುವ ನಿತಿನ್ ಪಟೇಲ್, ಇದು ಆತ್ಮಗೌರವದ ಪ್ರಶ್ನೆ ಎನ್ನುವ ಮೂಲಕ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಸುಳಿವು ನೀಡಿದ್ದಾರೆ. 

ಬಂದ್‌ಗೆ ಕರೆ: ಇದೇ ವೇಳೆ, ನಿತಿನ್ ಪಟೇಲ್‌ಗೆ ಸೂಕ್ತ ಸ್ಥಾನಕ್ಕೆ ಆಗ್ರಹಿಸಿ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ, ಸೋಮವಾರ ಮೆಹ್ಸಾನಾ ಜಿಲ್ಲಾ ಬಂದ್‌ಗೆ ಕರೆಕೊಟ್ಟಿದೆ. 

ಕಾಂಗ್ರೆಸ್‌ಗೆ ಆಹ್ವಾನ: ಮತ್ತೊಂದೆಡೆ, ನಿತಿನ್ ಪಟೇಲ್ ಅವರನ್ನು ಬಿಜೆಪಿ ನಾಯಕರು ಈ ರೀತಿ ನಡೆಸಿಕೊಳ್ಳುವುದು ಸರಿಯಿಲ್ಲ. ಇಂಥ ಸಮಯದಲ್ಲಿ ಪಟೇಲ್ ಸಮುದಾಯ ಒಂದಾಗಿ ಅವರ ಜೊತೆ ನಿಲ್ಲಬೇಕು ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ನೇತಾರ ಹಾರ್ದಿಕ್ ಪಟೇಲ್ ಕರೆಕೊಟ್ಟಿದ್ದಾರೆ. ಅಲ್ಲದೆ 10 ಬಿಜೆಪಿ ಶಾಸಕರೊಂದಿಗೆ ಕಾಂಗ್ರೆಸ್ ಸೇರಿಕೊಳ್ಳಿ. ಸರ್ಕಾರ ರಚಿಸಿ ಅದರರಲ್ಲಿ ಸೂಕ್ತ ಸ್ಥಾನ ಪಡೆಯಿರಿ ಎಂಬ ಆಫರ್ ನೀಡಿದ್ದಾರೆ.