ಅಹಮದಾಬಾದ್(ಡಿ.06): ಇವರ ಹೆಸರು ಡಾ. ತೇಜಸ್ ಪಟೇಲ್ ಅಂತಾ. ಅಹಮದಾಬಾದ್ ಮೂಲದ ತೇಜಸ್ ಪಟೇಲ್ ಇದೀಗ ಕೇವಲ ಗುಜರಾತ್ ಅಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಫೇಮಸ್ ಆಗಿರುವ ವೈದ್ಯ.

ಹಾರ್ಟ್ ಸ್ಪೆಶಲಿಸ್ಟ್ ಆಗಿರುವ ಡಾ। ತೇಜಸ್ ಪಟೇಲ್, ಇತ್ತೀಚಿಗೆ ಹೊಸ ತಂತ್ರಜ್ಞಾನದ ಮೂಲಕ ವ್ಯಕ್ತಿಯೋರ್ವನ  ಯಶಸ್ವಿ ಹೃದಯ ಚಿಕಿತ್ಸೆ ಮಾಡಿ ಇಡೀ ವಿಶ್ವವನ್ನೇ ನಿಬ್ಬೆರಗುಗೊಳಿಸಿದ್ದಾರೆ. ಹೌದು, ತೇಜಸ್ ಪಟೇಲ್ ಅವರು ಆಪರೇಶನ್ ಥಿಯೇಟರ್ ಗೆ ಹೋಗದೇ, ಆಸ್ಪತ್ರೆಯಿಂದ 32 ಕಿ.ಮೀ. ದೂರ ಕುಳಿತು ರೋಬೋಟ್ಸ್ ಗಳಿಗೆ ಸಲಹೆ ನೀಡುವ ಮೂಲಕ ಯಶಸ್ವಿ ಹೃದಯ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ.

ಟೆಲಿರೊಬೊಟಿಕ್ ಪರಿಧಮನಿಯ ಮಧ್ಯಸ್ಥಿಕೆ ತಂತ್ರಜ್ಞಾನದಿಂದ ಡಾ। ತೇಜಸ್ ಪಟೇಲ್ ಈ ಯಶಸ್ವಿ ಹೃದಯ ಚಿಕಿತ್ಸೆ ಮಾಡಿದ್ದು, ಇಂತಹ ಆಪರೇಶನ್ ಇಡೀ ವಿಶ್ವದಲ್ಲೇ ಇದೇ ಮೊದಲು ಎನ್ನಲಾಗಿದೆ.

ಅಹಮದಾಬಾದ್ ನ ಅಕ್ಷರಧಾಮ್ ದೇವಸ್ಥಾನದ ಕಂಟ್ರೋಲ್ ರೂಂನಲ್ಲಿ ಕುಳಿತು ನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಗೆ ರೋಬೋಟ್ಸ್ ಗಳ ಮೂಲಕ ಯಶಸ್ವಿ ಹೃದಯ ಚಿಕಿತ್ಸೆ ಮಾಡಲಾಗಿದೆ. ಡಾ. ಪಟೇಲ್ ರೋಬೋಟ್ಸ್ ಗಳಿಗೆ ಕಂಟ್ರೋಲ್ ರೂಂನಿಂದಲೇ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಚಿಕಿತ್ಸೆ ಯಶಸ್ವಿಗೊಳಿಸಿದ್ದಾರೆ.