ಭಾರತರತ್ನಕ್ಕೆ ಶಿಫಾರಸು ಹೇಳಿಕೆ ಪ್ರಶ್ನಿಸಿದ ಇತಿಹಾಸಕಾರ ರಾಮಚಂದ್ರ ಗುಹಾ

ನವದೆಹಲಿ: ಸೇನಾ ಮುಖ್ಯಸ್ಥ, ಕನ್ನಡಿಗ ಫೀ|ಮಾ| ಕೆ. ಎಂ. ಕಾರ್ಯಪ್ಪರಿಗೆ ಭಾರತರತ್ನ ನೀಡಬೇಕು ಎಂದು ಇತ್ತೀಚೆಗೆ ಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್, ಕೊಡಗಿಗೆ ಭೇಟಿ ನೀಡಿದಾಗ ಮಾಡಿದ ಆಗ್ರಹ ವಿವಾದದ ಸ್ವರೂಪ ಪಡೆದುಕೊಂಡಿದೆ.

ರಾವತ್ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ ಎಂದು ಇತ್ತೀಚೆಗೆ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಪ್ರತಿಕ್ರಿಯಿಸಿದ್ದರು. ಇದರ ಬೆನ್ನಲ್ಲೇ ‘ದ ಇಂಡಿಯನ್ ಎಕ್ಸ್‌ಪ್ರೆಸ್’ಗೆ ಲೇಖನ ಬರೆದಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರು ಸಿಂಘ್ವಿ ಹೇಳಿಕೆಗೆ ಸಹಮತ ವ್ಯಕ್ತಪಡಿಸುವ ರೀತಿ ಯಲ್ಲೇ ಅನಿಸಿಕೆ ಹಂಚಿಕೊಂಡಿದ್ದಾರೆ.

ಗುಹಾ ಹೇಳಿಕೆಯ ಸಾರವೇನು?: ಆಂಗ್ಲ ಪತ್ರಿಕೆಗೆ ಗುರುವಾರ ‘ಜನರಲ್ ತುಂಬಾ ಮಾತಾಡ್ತಾರೆ’ ಎಂಬ ಶೀರ್ಷಿಕೆಯಲ್ಲಿ ಲೇಖನ ಬರೆದಿರುವ ರಾಮಚಂದ್ರ ಗುಹಾ, ‘ಕಳೆದ ವಾರ ಗೋಣಿಕೊಪ್ಪಲಿಗೆ ಭೇಟಿ ಜ| ರಾವತ್ ನೀಡಿದ್ದರು. ಈ ವೇಳೆ ಮಾತನಾಡಿದ್ದ ಅವರು, ‘ಇತರರಿಗೆ ಭಾರತ ರತ್ನ ಸಿಗುತ್ತದೆ ಎಂದರೆ ಕಾರ್ಯಪ್ಪ ಅವರಿಗೆ ಏಕೆ ಸಿಗಬಾರದು. ಅವರು ಈ ಗೌರವಕ್ಕೆ ಅರ್ಹ. ಅವರಿಗೆ ಭಾರತರತ್ನ ಸಿಗಬೇಕೆಂದು ನಾವು ಆದ್ಯತೆಯ ಮೇರೆಗೆ ಒತ್ತಾಯಿಸುತ್ತೇವೆ’ಎಂದು ಹೇಳಿದ್ದರು.

ನನಗೆ ಕಾರ್ಯಪ್ಪ ಬಗ್ಗೆ ಗೌರವವಿದೆ. ಆದರೆ ತಮಗಿಂತ ಮೊದಲು ಸೇನಾಧಿಕಾರಿಯಾಗಿದ್ದವರಿಗೆ ಭಾರತರತ್ನ ನೀಡಬೇಕು ಎಂದು ಬಹಿರಂಗವಾಗಿ ಶಿಫಾರಸು ಮಾಡುವ ಅಧಿಕಾರ ಜ| ರಾವತ್‌ಗಿಲ್ಲ. ಮೇಲಾಗಿ, ಕರ್ನಾಟಕ ಚುನಾವಣೆ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಇದನ್ನು ಪ್ರಸ್ತಾಪಿಸುವ ಅಗತ್ಯ ಇರಲಿಲ್ಲ’ ಎಂದಿದ್ದಾರೆ.

‘ಫೀ|ಮಾ| ಕಾರ್ಯಪ್ಪಗೆ ಇರುವ ಒಂದೇ ಖ್ಯಾತಿ ಎಂದರೆ ಅವರು ಮೊದಲ ಸೇನಾ ಮುಖ್ಯಸ್ಥ ಎಂಬುದು. ಅವರು ಯುದ್ಧಭೂಮಿ ಯಲ್ಲಿ ಮತ್ತು ರಣನೀತಿಯಲ್ಲಿ ಸರ್ವಶ್ರೇಷ್ಠರೇನೂ ಆಗಿರಲಿಲ್ಲ. ಅವರಿಗಿಂತ ಇನ್ನೊಬ್ಬ ಕೊಡವ ಜನರಲ್ ಆದ ಜ| ಕೆ.ಎಸ್. ತಿಮ್ಮಯ್ಯನವರೇ ಉತ್ತಮ ಎಂದು ಸೇನಾ ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ’ ಎಂದು ಗುಹಾ ಬರೆದಿದ್ದಾರೆ.