ಮಂಗಳೂರು :  ರಾಜ್ಯದ ಅತಿಥಿ ಶಿಕ್ಷಕರಿಗೆ ಸಿಗುತ್ತಿರುವ ಗೌರವ ಧನವೇ ಅತಿ ಕಡಿಮೆ. ಆದರೆ ಅದು ಕೂಡ ಕಳೆದ ಆರು ತಿಂಗಳಿನಿಂದ ರಾಜ್ಯದ ಬಹುತೇಕ ಅತಿಥಿ ಶಿಕ್ಷಕರ ಕೈಸೇರಿಲ್ಲ!

ಅನೇಕ ಒತ್ತಡದ ಬಳಿಕ ಕೊನೆಗೂ ರಾಜ್ಯ ಸರ್ಕಾರ ಇತ್ತೀಚೆಗೆ ಅತಿಥಿ ಶಿಕ್ಷಕರ ಗೌರವಧನ ಬಿಡುಗಡೆಗೊಳಿಸಿತ್ತು. ಆದರೆ ರಾಜಧಾನಿ ಬೆಂಗಳೂರಿನ ಖನಿಜ ಭವನದಲ್ಲಿರುವ ನೆಟ್‌ವರ್ಕ್ ಮ್ಯಾನೇಜ್‌ಮೆಂಟ್‌ ಸೆಂಟರ್‌(ಎನ್‌ಎಂಸಿ) ಸಿಬ್ಬಂದಿಯ ಎಡವಟ್ಟಿನಿಂದಾಗಿ ಹೆಚ್ಚಿನ ತಾಲೂಕುಗಳಿಗೆ ಈ ಹಣವೇ ಹಂಚಿಕೆಯಾಗಿಲ್ಲ ಎನ್ನುವ ಅಂಶ ತಿಳಿದುಬಂದಿದೆ. ಇದರಿಂದಾಗಿ ರಾಜ್ಯದಲ್ಲಿರುವ 20 ಸಾವಿರಕ್ಕೂ ಅಧಿಕ ಅತಿಥಿ ಶಿಕ್ಷಕರು ಜೀವನ ನಿರ್ವಹಣೆಗೂ ಕಷ್ಟಪಡುತ್ತಿದ್ದಾರೆ. ಶಿಕ್ಷಕರನ್ನು ಸಂಕಷ್ಟಕ್ಕೆ ತಳ್ಳಿ ಗುಣಮಟ್ಟದ ಪಾಠ ನಿರೀಕ್ಷೆ ಮಾಡುವ ದುರ್ಗತಿ ಒದಗಿದೆ.

ಬಹುತೇಕ ತಾಲೂಕುಗಳಲ್ಲಿ ಸಮಸ್ಯೆ:

ಸರ್ಕಾರದ ಮಾನದಂಡದಂತೆ, ಶಿಕ್ಷಕರ ಕೊರತೆ ಎದುರಿಸುತ್ತಿರುವ ಶಾಲೆಗಳಲ್ಲಿ ಕಳೆದ ಜೂನ್‌- ಜುಲೈ ತಿಂಗಳಲ್ಲಿ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಪ್ರಾಥಮಿಕ ಶಾಲೆಯಲ್ಲಾದರೆ 7.5 ಸಾವಿರ ರು., ಪ್ರೌಢಶಾಲೆ ಅತಿಥಿ ಶಿಕ್ಷಕರಿಗೆ 8 ಸಾವಿರ ರು. ವೇತನ ನಿಗದಿಗೊಳಿಸಲಾಗಿತ್ತು. ಇಷ್ಟುಕಡಿಮೆ ವೇತನವನ್ನೂ ಕ್ರಮಬದ್ಧವಾಗಿ ನೀಡುವಲ್ಲಿ ಆಡಳಿತ ವ್ಯವಸ್ಥೆ ಎಡವಿದೆ. ಕೇವಲ ಬೆರಳೆಣಿಕೆ ತಾಲೂಕುಗಳ ಶಿಕ್ಷಕರಿಗೆ ಕಳೆದ ನಾಲ್ಕೈದು ದಿನಗಳಿಂದ ವೇತನ ಪಾವತಿಯಾದದ್ದು ಬಿಟ್ಟರೆ, ಬಹುತೇಕ ತಾಲೂಕುಗಳ ಶಿಕ್ಷಕರಿಗೆ ಇನ್ನೂ ಪಾವತಿಯೇ ಆಗಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಕೇಳಿದರೆ ತಾಂತ್ರಿಕ ಸಮಸ್ಯೆ, ಶೀಘ್ರ ಸರಿಯಾಗಲಿದೆ ಎಂದು ಕೈತೊಳೆಯುತ್ತಿದ್ದಾರೆ.

ಏನು ಸಮಸ್ಯೆ?:

ಜಿಲ್ಲೆಗಳಿಂದ ಗೌರವಧನ ಅನುದಾನದ ಬೇಡಿಕೆ ಸಲ್ಲಿಕೆಯಾದ ಬಳಿಕ ಎನ್‌ಎಂಸಿ ಮೂಲಕ ತಾಲೂಕು ಪಂಚಾಯ್ತಿಗಳಿಗೆ ಅನುದಾನ ಬಿಡುಗಡೆಯಾಗುತ್ತದೆ. ಅಲ್ಲಿಂದ ತಾಲೂಕು ಖಜಾನೆಗೆ ಹಣ ವರ್ಗಾವಣೆಯಾಗುತ್ತದೆ. ಬಳಿಕ ಬಿಇಒ(ಪ್ರಾಥಮಿಕ ಶಾಲೆಗಳಿಗಾದರೆ), ಮುಖ್ಯ ಶಿಕ್ಷಕ (ಹೈಸ್ಕೂಲು)ರು ಬಿಲ್‌ನ್ನು ಆಯಾ ತಾಲೂಕು ಖಜಾನೆಗೆ ಸಲ್ಲಿಸಿದರೆ ಚೆಕ್‌ ರಿಲೀಸ್‌ ಆಗುತ್ತದೆ. ಆದರೆ ಖನಿಜ ಭವನದಲ್ಲಿ ತಾಲೂಕುಗಳ ಅನುದಾನ ಹಂಚಿಕೆ ವಿವರಗಳನ್ನು ಆನ್‌ಲೈನ್‌ ವ್ಯವಸ್ಥೆಗೆ ಅಪ್‌ಲೋಡ್‌ ಮಾಡುವಾಗ ವಿಳಂಬ, ದೋಷ ಈ ಎಲ್ಲ ಸಮಸ್ಯೆಗೆ ಕಾರಣ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಈ ಸಮಸ್ಯೆ ಪರಿಹರಿಸಲು ತಾಲೂಕು ಬಿಇಒಗಳಿಗೆ ಬೆಂಗಳೂರಿಗೆ ಎಡತಾಕುವುದೇ ಕೆಲಸವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನೇ ಪರಿಗಣಿಸಿದರೆ ಸುಳ್ಯ ಮತ್ತು ಪುತ್ತೂರು ತಾಲೂಕಿನ ಶಿಕ್ಷಕರಿಗೆ ಮಾತ್ರ ಗೌರವಧನ ಬಿಡುಗಡೆ ಆಗಿದೆ. ಇತರ ತಾಲೂಕುಗಳ ಬಿಇಒಗಳು ಖನಿಜ ಭವನದಲ್ಲಿ ಹರಸಾಹಸ ಮಾಡಿ ಕೊನೆಗೂ ಬಿಡುಗಡೆಯ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ‘ಇದು ನಮ್ಮ ಜಿಲ್ಲೆಯ ಸಮಸ್ಯೆ ಮಾತ್ರ ಅಲ್ಲ, ರಾಜ್ಯದ ಅನೇಕ ತಾಲೂಕುಗಳಿಗೆ ಇನ್ನೂ ಅನುದಾನವೇ ಹೋಗಿಲ್ಲ. ಎಲ್ಲ ಕಡೆಯಿಂದಲೂ ದೂರುಗಳು ಸಲ್ಲಿಕೆಯಾಗುತ್ತಿವೆ’ ಎಂದು ಬಿಇಒ ಒಬ್ಬರು ಹೇಳಿದ್ದಾರೆ.

ಊಟಕ್ಕೂ ಗತಿಯಿಲ್ಲ:

ಗೌರವಧನವನ್ನೇ ನಂಬಿಕೊಂಡ ಶಿಕ್ಷಕರ ಪಾಡಂತೂ ಹೇಳತೀರದು. ‘ಒಂದೆರಡು ತಿಂಗಳಾಗಿದ್ದರೆ ಪರವಾಗಿರಲಿಲ್ಲ. ಆದರೆ ಆರು ತಿಂಗಳಾಯ್ತು ಗೌರವಧನ ಸಿಗದೆ. ಮೊದಮೊದಲು ಸಾಲ ಮಾಡಿದೆ. ಈಗ ಸಾಲ ಕೊಡುವವರೂ ಇಲ್ಲ. ಮಕ್ಕಳ ವಿದ್ಯಾಭ್ಯಾಸ-ಔಷಧ ಖರ್ಚಿಗೂ ಹಣ ಇಲ್ಲ. ಕೆಲವೊಮ್ಮೆ ಊಟಕ್ಕೂ ಪರದಾಡಬೇಕಾಗುತ್ತದೆ. ಇಷ್ಟುಕಷ್ಟದಲ್ಲಿದ್ದು ಒಳ್ಳೆಯ ಪಾಠ ಮಾಡುವುದು ಹೇಗೆ?’’ ಎಂದು ಮಂಗಳೂರಿನ ಅತಿಥಿ ಶಿಕ್ಷಕರೊಬ್ಬರು ಅಳಲು ತೋಡಿಕೊಳ್ಳುತ್ತಾರೆ.

ಬಂದಿದ್ದು ನಾಲ್ಕೇ ತಿಂಗಳದ್ದು:

ಪ್ರಸ್ತುತ ಅನುದಾನ ಬಿಡುಗಡೆಯಾಗಿರುವುದು ಅಕ್ಟೋಬರ್‌ ತಿಂಗಳವರೆಗಿನ ಗೌರವಧನ ಮಾತ್ರ. ಇದೇ ಸರಿಯಾಗಿ ವಿತರಣೆಯಾಗಿಲ್ಲ. ಇನ್ನು ಮುಂದಿನ ಹಂತದ ಅನುದಾನ ಬಿಡುಗಡೆಗೆ ಇನ್ನೆಷ್ಟುತಿಂಗಳು ಕಾಯಬೇಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಉದ್ಯೋಗವೇ ಅತಂತ್ರವಾಗಿರುವಾಗ ಸಿಗುವ ಗೌರವಧನವೂ ಸಿಗದಿದ್ದರೆ ಪರಿಸ್ಥಿತಿ ನಿಭಾಯಿಸುವುದಾದರೂ ಹೇಗೆ ಎಂಬುದು ಈ ಶಿಕ್ಷಕರ ಅಳಲಾಗಿದೆ.


ಅತಿಥಿ ಶಿಕ್ಷಕರ ಗೌರವಧನ ಸರ್ಕಾರದಿಂದ ಬಿಡುಗಡೆಯಾಗಿ ಕೆಲವು ತಾಲೂಕು ಶಿಕ್ಷಕರಿಗೆ ದೊರೆತಿದೆ. ಬೆಂಗಳೂರಿನಲ್ಲಿ ಆನ್‌ಲೈನ್‌ ಅಪ್‌ಲೋಡ್‌ ವ್ಯವಸ್ಥೆಯಲ್ಲಿ ತಾಂತ್ರಿಕ ತೊಂದರೆ ಉಂಟಾಗಿದ್ದರಿಂದ ಅನೇಕ ಕಡೆಗಳಲ್ಲಿ ಸಮಸ್ಯೆಯಾಗಿದೆ.

-ಶಿವರಾಮಯ್ಯ, ಡಿಡಿಪಿಐ, ದ.ಕ

ವರದಿ : ಸಂದೀಪ್‌ ವಾಗ್ಲೆ