ಬರುವ ಏಪ್ರಿಲ್‌ 1ರಿಂದಲೇ ಶೇ.5, ಶೇ.12, ಶೇ.18 ಮತ್ತು ಶೇ.28 ಈ ನಾಲ್ಕು ಹಂತದ ತೆರಿಗೆಗಳು ರಾಷ್ಟ್ರವ್ಯಾಪಿ ಅನ್ವಯ­ವಾಗಲಿವೆ.
ನವದೆಹಲಿ: ಜನಸಾಮಾನ್ಯರ ತೆರಿಗೆ ಹೊರೆ ತಗ್ಗಿಸುವ ಮತ್ತು ಹಣದುಬ್ಬರ ನಿಯಂತ್ರಿಸುವ ಗುರಿಯೊಂದಿಗೆ ನಾಲ್ಕು ಹಂತದ ಸರಕು ಮತ್ತು ಸೇವಾ ತೆರಿಗೆಗೆ ಗುರುವಾರ ಜಿಎಸ್ಟಿ ಮಂಡಳಿ ಅನುಮೋದನೆ ನೀಡಿದೆ. ಇದರೊಂದಿಗೆ ಸ್ವಾತಂತ್ರ್ಯೋತ್ತರ ಭಾರತವು ಅತಿದೊಡ್ಡ ತೆರಿಗೆ ಸುಧಾರಣಾ ವ್ಯವಸ್ಥೆಗೆ ತೆರೆದುಕೊಂಡಿದೆ.
ಬರುವ ಏಪ್ರಿಲ್ 1ರಿಂದಲೇ ಶೇ.5, ಶೇ.12, ಶೇ.18 ಮತ್ತು ಶೇ.28 ಈ ನಾಲ್ಕು ಹಂತದ ತೆರಿಗೆಗಳು ರಾಷ್ಟ್ರವ್ಯಾಪಿ ಅನ್ವಯವಾಗಲಿವೆ. ಒಂದು ದೇಶ-ಒಂದೇ ತೆರಿಗೆ ವ್ಯವಸ್ಥೆಯು ನಮ್ಮ ಆರ್ಥಿಕತೆಯನ್ನು ಮತ್ತಷ್ಟುಸದೃಢಗೊಳಿಸಲಿದೆ. ಹೊಸ ತೆರಿಗೆ ಜಾರಿಯಿಂದ ಜಿಡಿಪಿಯು ಶೇ.1.5ರಿಂದ ಶೇ.2ರಷ್ಟುಹೆಚ್ಚಾಗುವ ಅಂದಾಜಿದೆ.
ಜನ ಸಮೂಹ ಬಳಸುವ ಸರಕುಗಳ ಮೇಲೆ ಕನಿಷ್ಠ ತೆರಿಗೆ ಅಂದರೆ ಶೇ.5ರಷ್ಟುತೆರಿಗೆ ವಿಧಿಸಲಾಗುತ್ತದೆ. ಶೇ.12 ಮತ್ತು ಶೇ.18 ಸ್ಟ್ಯಾಂಡರ್ಡ್ ತೆರಿಗೆಗಳಾಗಿವೆ. ವಿಲಾಸಿ ಮತ್ತು ಹಾನಿಕಾರಕ ವಸ್ತುಗಳ ಮೇಲೆ ಶೇ.28ರಷ್ಟುತೆರಿಗೆ ಹೇರಲಾಗುತ್ತದೆ. ಜತೆಗೆ ಉಪಕರ(ಸೆಸ್)ಗಳನ್ನೂ ವಿಧಿಸಲಾಗುತ್ತದೆ. ಈಗ ಹಾಲಿ ಶೇ.15ರಷ್ಟುಇರುವ ಸೇವಾ ತೆರಿಗೆಯು ಶೇ.18ಕ್ಕೆ ಏರುವುದರಿಂದ ಬಹುತೇಕ ಸೇವೆಗಳೆಲ್ಲವೂ ದುಬಾರಿ ಆಗಲಿವೆ.
ಕೇಂದ್ರ ಸರ್ಕಾರ ಜಿಎಸ್ಟಿ ಮಂಡಳಿ ಮುಂದೆ ಶೇ.6, 12, 18 ಮತ್ತು ಶೇ.26ರ 4 ಹಂತಗಳ ತೆರಿಗೆ ಪ್ರಸ್ತಾವವನ್ನಿಟ್ಟಿತ್ತು. ಜಿಎಸ್ಟಿ ಮಂಡಳಿಯು ಜನಸಾಮಾನ್ಯರಿಗೆ ಹೊರೆ ತಗ್ಗಿಸುವ ಮತ್ತು ವಿಲಾಸಿ ಮತ್ತು ಹಾನಿಕಾರಕ ವಸ್ತುಗಳ ಮೇಲಿನ ತೆರಿಗೆ ಹೊರೆ ಹೆಚ್ಚಿಸುವ ಸಲುವಾಗಿ ಕನಿಷ್ಠ ತೆರಿಗೆಯನ್ನು ಶೇ.5ಕ್ಕೆ ಇಳಿಸಿ, ಗರಿಷ್ಠ ತೆರಿಗೆಯನ್ನು ಶೇ.28ಕ್ಕೆ ಏರಿಸಿದೆ.
ರೈಲ, ಮದ್ಯ ಹೊರಕ್ಕೆ:
ಪೆಟ್ರೋಲ್, ಡೀಸೆಲ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳು, ಆಲ್ಕೋಹಾಲ್ ಅನ್ನು ಜಿಎಸ್'ಟಿಯಿಂದ ಹೊರಗಿಡಲಾಗಿದೆ. ಈ ಎರಡೂ ಉತ್ಪನ್ನಗಳ ಮೇಲೆ ರಾಜ್ಯ ಸರಕಾರಗಳೇ ತೆರಿಗೆ ವಿಧಿಸುವ ಅಧಿಕಾರ ಹೊಂದಿವೆ. ಈ ಎರಡೂ ಆಯಾ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಆದಾಯ ಮೂಲಗಳಾಗಿವೆ.
ಚಿನ್ನಕ್ಕೆ ಶೇ. 4ರಷ್ಟು?
ಚಿನ್ನದ ಮೇಲೆ ಶೇ.4ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ಸಭೆ ಬಹುತೇಕ ಒಪ್ಪಿತ್ತು. ಆದರೆ, ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಶೇ. 2ರಷ್ಟು ತೆರಿಗೆ ವಿಧಿಸಬೇಕೆಂಬ ಬೇಡಿಕೆ ಇಟ್ಟರು. ಹೀಗಾಗಿ ಸಭೆಯಲ್ಲಿ ಒಮ್ಮತ ಮೂಡಿಲ್ಲ. ಮುಂದಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಯಾವ್ಯಾವುದಕ್ಕೆ ಎಷ್ಟೆಷ್ಟುತೆರಿಗೆ?
* ಜನಸಮೂಹ ದಿನ ನಿತ್ಯ ಬಳಸುವ ಸರಕುಗಳ ಮೇಲಿನ ತೆರಿಗೆ ಶೇ.5
* ಹಾಲಿ ಶೇ. 15ರಷ್ಟುಇರುವ ಸೇವಾ ತೆರಿಗೆ ಇನ್ನುಮುಂದೆ ಶೇ.18
* ಆಹಾರಧಾನ್ಯಗಳಿಗೆ ಸರಕು ಸೇವಾ ತೆರಿಗೆಯಿಂದ ವಿನಾಯಿತಿ
* ಶೇ.60ರಷ್ಟುಸರಕುಗಳು ಶೇ.12-ಶೇ.18ರ ವ್ಯಾಪ್ತಿಗೆ
* ಗರಿಷ್ಠ ವ್ಯಾಪ್ತಿಯ ಹಲವು ಸರಕು ಶೇ.18ರ ವ್ಯಾಪ್ತಿಗೆ
* ವಿಲಾಸಿ, ಹಾನಿಕಾರಕ ಸರಕುಗಳ ಮೇಲೆ ಶೇ.28ರಷ್ಟುತೆರಿಗೆ ಮತ್ತು ಸೆಸ್
(ಕನ್ನಡಪ್ರಭ ವಾರ್ತೆ)
