ನವದೆಹಲಿ (ಡಿ. 25):  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತು ವ್ಯಾಪಾರ ವಲಯದಲ್ಲಿರುವ ಕಳವಳಗಳನ್ನು ಹೋಗಲಾಡಿಸುವ ಪ್ರಯತ್ನ ಮುಂದುವರಿಸಿರುವ ಕೇಂದ್ರ ಸರ್ಕಾರ, ಸದ್ಯ ಜಿಎಸ್‌ಟಿಯಲ್ಲಿರುವ 5 ತೆರಿಗೆ ಸ್ಲಾ್ಯಬ್‌ಗಳನ್ನು 4ಕ್ಕೆ ಇಳಿಸಲು ಚಿಂತನೆಯಲ್ಲಿ ತೊಡಗಿದೆ. ಶೇ.12 ಹಾಗೂ ಶೇ.18 ರ ತೆರಿಗೆ ದರಗಳನ್ನು ವಿಲೀನಗೊಳಿಸಿ, ಒಂದು ತೆರಿಗೆ ದರವನ್ನು ನಿಗದಿಗೊಳಿಸುವ ಸುಳಿವನ್ನು ಖುದ್ದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರೇ ನೀಡಿದ್ದಾರೆ.

ಜಿಎಸ್‌ಟಿ ಜಾರಿಯಾದಾಗಿನಿಂದ ಅದನ್ನು ಸರಳಗೊಳಿಸುವ ಕಸರತ್ತಿನಲ್ಲಿ ತೊಡಗಿರುವ ಕೇಂದ್ರ ಸರ್ಕಾರ, ಕಳೆದ ವಾರವಷ್ಟೇ 23 ವಸ್ತುಗಳ ತೆರಿಗೆ ದರಗಳನ್ನು ಇಳಿಸಿತ್ತು. ಇದರ ನಡುವೆಯೇ, ಫೇಸ್‌ಬುಕ್‌ನಲ್ಲಿ ‘ಜಿಎಸ್‌ಟಿ 18 ತಿಂಗಳು’ ಎಂಬ ತಲೆಬರಹದಡಿ ಲೇಖನ ಬರೆದಿರುವ ಜೇಟ್ಲಿ ಅವರು, ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಭವಿಷ್ಯದಲ್ಲಿ ಶೇ.12 ಹಾಗೂ ಶೇ.18ರ ತೆರಿಗೆ ದರಗಳ ಬದಲಿಗೆ ಒಂದೇ ಸ್ಟಾಂಡರ್ಡ್‌ ತೆರಿಗೆ ದರ ಇಟ್ಟುಕೊಳ್ಳುವ ಉದ್ದೇಶವಿದೆ. ಆ ತೆರಿಗೆ ದರ ಶೇ.12 ಹಾಗೂ ಶೇ.18ರ ಮಧ್ಯಭಾಗದಲ್ಲಿರುತ್ತದೆ. ಆದರೆ ಇದಕ್ಕಾಗಿ ಸಮಯ ಹಿಡಿಯುತ್ತದೆ. ಏಕೆಂದರೆ, ತೆರಿಗೆ ಸಂಗ್ರಹ ಹೆಚ್ಚಾಗಬೇಕಾಗುತ್ತದೆ. ಹಾಗಾದಾಗ ದೇಶದಲ್ಲಿ ಶೂನ್ಯ, ಶೇ.5, ಸ್ಟಾಂಡರ್ಡ್‌ ದರ ಹಾಗೂ ಐಷಾರಾಮಿ ವಸ್ತುಗಳಿಗಾಗಿ ಶೇ.28ರ ತೆರಿಗೆ ದರ ಇರುತ್ತದೆ ಎಂದು ತಿಳಿಸಿದ್ದಾರೆ.

1216 ವಸ್ತುಗಳ ಪೈಕಿ 183 ವಸ್ತುಗಳು ಶೂನ್ಯ, 308 ವಸ್ತುಗಳು ಶೇ.5, 178 ವಸ್ತುಗಳು ಶೇ.12 ಹಾಗೂ 517 ವಸ್ತುಗಳು ಶೇ.18ರ ತೆರಿಗೆ ಸ್ಲಾ್ಯಬ್‌ನಡಿ ಬರುತ್ತವೆ. ಶೇ.28ರ ತೆರಿಗೆ ದರ ನಿಧಾನವಾಗಿ ಮರೆಯಾಗುತ್ತಿದ್ದು, ಸದ್ಯ ಅದರಲ್ಲಿ ಐಷಾರಾಮಿ ವಸ್ತುಗಳು, ಸಿಗರೆಟ್‌, ತಂಬಾಕಿನಂತಹ ಪಾಪದ ಸರಕು, ಆಟೋಮೊಬೈಲ್‌ ಬಿಡಿಭಾಗ, ಡಿಶ್‌ವಾಶರ್‌, ಎಸಿಯಂತಹ ವಸ್ತುಗಳು ಇವೆ.

ಶೇ.28 ತೆರಿಗೆ ಸ್ಲಾ್ಯಬ್‌ನಡಿ ಐಷಾರಾಮಿ, ಪಾಪದ ಸರಕು ಹೊರತುಪಡಿಸಿ, ಉಳಿದವನ್ನು ಹೊರಗಿಡಲಾಗುತ್ತದೆ. ಸಿಮೆಂಟ್‌ ಅನ್ನು ಕಡಿಮೆ ಸ್ಲಾ್ಯಬ್‌ ಇಳಿಸುವುದೇ ನಮ್ಮ ಮುಂದಿನ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಜಿಎಸ್‌ಟಿ ಎಂಬುದು ತಪ್ಪು ಮಾಹಿತಿಯಿಂದ ಕೂಡಿದ ತೆರಿಗೆ ಎಂಬ ಟೀಕೆಗಳನ್ನು ತಿರಸ್ಕರಿಸಿರುವ ಅವರು, ಹೊಸ ಪರೋಕ್ಷ ತೆರಿಗೆ ಪದ್ಧತಿಯಿಂದಾಗಿ ತೆರಿಗೆಗಳು, ಹಣದುಬ್ಬರ ಕಡಿಮೆಯಾಗಿದ್ದು, ತೆರಿಗೆ ಸೋರಿಕೆಯೂ ಕುಗ್ಗಿದೆ ಎಂದಿದ್ದಾರೆ.