Asianet Suvarna News Asianet Suvarna News

ರೈತರಿಗೆ ಸರ್ಕಾರದಿಂದ ಕಡ್ಡಾಯ ನಿಯಮ ಜಾರಿ?

ರಾಜ್ಯ ಸರ್ಕಾರ ಇದೀಗ ರೈತರಿಗೆ ಹೊಸ ನಿಯಮವೊಂದನ್ನು ಜಾರಿ ಮಾಡಲು ಚಿಂತನೆ ನಡೆಸಿದೆ. 20 ಮರಗಳನ್ನು ನೆಟ್ಟು ಪೋಷಿಸುವುದನ್ನು ಕಡ್ಡಾಯಗೊಳಿಸಲು ಹೊಸ ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಅರಣ್ಯ ಸಚಿವ ಆರ್‌.ಶಂಕರ್‌ ತಿಳಿಸಿದ್ದಾರೆ.

Growing 20 Trees May Become Mandatory On Agri Land
Author
Bengaluru, First Published Sep 7, 2018, 10:07 AM IST

ಬೆಂಗಳೂರು :  ರಾಜ್ಯದಲ್ಲಿ ಹಸಿರೀಕರಣ ಮತ್ತು ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯದ ರೈತರು ತಮ್ಮ ಭೂಮಿಯಲ್ಲಿ ಒಂದು ಎಕರೆಗೆ ಕನಿಷ್ಠ 20 ಮರಗಳನ್ನು ನೆಟ್ಟು ಪೋಷಿಸುವುದನ್ನು ಕಡ್ಡಾಯಗೊಳಿಸಲು ಹೊಸ ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಅರಣ್ಯ ಸಚಿವ ಆರ್‌.ಶಂಕರ್‌ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ರಾಜ್ಯದ ಮೃಗಾಲಯಗಳ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಶ್ರೀಗಂಧ ಸೇರಿದಂತೆ ತಾವು ಇಷ್ಟಪಡುವ ಮರ ಬೆಳೆಸಬಹುದಾಗಿದೆ. ಪ್ರತಿ ಮರಕ್ಕೆ 100 ರು. ಪ್ರೋತ್ಸಾಹ ಧನ ನೀಡಲಾಗುವುದು. ಒಂದು ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 400 ಮರ ಬೆಳೆಯಬಹುದಾಗಿದೆ. ಈ ರೀತಿ ಮರ ಬೆಳೆಯುವುದರಿಂದ ರೈತರಿಗೂ ಅನುಕೂಲವಾಗಲಿದೆ. ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಹಸಿರೀಕರಣ ಹೆಚ್ಚಿಸಲು ಆರಂಭಿಸಿರುವ ‘ಹಸಿರು ಕರ್ನಾಟಕ’ ಕಾರ್ಯಕ್ರಮದ ಅಡಿ ರಾಜ್ಯಾದ್ಯಂತ 10 ಕೋಟಿ ಸಸಿ ನೆಡಲು ಉದ್ದೇಶಿಸಲಾಗಿದೆ. ಅದೇ ರೀತಿ ರಾಜ್ಯದ ಎಲ್ಲ ತಾಲೂಕುಗಳಲ್ಲಿ ನಿರ್ಮಿಸಲಾಗುತ್ತಿರುವ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ (ಟ್ರೀ ಪಾರ್ಕ್) ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ತುಮಕೂರು ಜಿಲ್ಲೆಯ ಗುಬ್ಬಿ ಹಾಗೂ ಕೊಪ್ಪಳ ತಾಲೂಕಿನಲ್ಲಿ ಸಸ್ಯೋದ್ಯಾನಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗಿದೆ ಎಂದು ತಿಳಿಸಿದರು.

ಹಸಿರೀಕರಣ ಹೆಚ್ಚಿಸಲು ಹಾಗೂ ಅರಣ್ಯ ಪ್ರದೇಶ ರಕ್ಷಣೆಗೆ ಸರ್ಕಾರ ಕೈಗೊಂಡ ಕ್ರಮದಿಂದಾಗಿ ಶೇ.21ರಷ್ಟಿದ್ದ ಅರಣ್ಯ ಪ್ರದೇಶ ಈಗ 22.5ರಷ್ಟುಹೆಚ್ಚಾಗಿದೆ ಎಂದ ಸಚಿವ ಆರ್‌. ಶಂಕರ್‌, ಮೀಸಲು ಹಾಗೂ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರೆಸಾರ್ಟ್‌ ಸ್ಥಾಪನೆಗೆ ಅವಕಾಶ ನೀಡಿಲ್ಲ. ಒಂದು ವೇಳೆ ಕಾನೂನು ಬಾಹಿರವಾಗಿ ರೆಸಾರ್ಟ್‌ ಸ್ಥಾಪಿಸಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ.ಘಟ್ಟಬಗ್ಗೆ ಮತ್ತೆ ಚರ್ಚೆ:  ಪಶ್ಚಿಮ ಘಟ್ಟಸಂರಕ್ಷಣೆ ಕುರಿತಂತೆ ಡಾ. ಕಸ್ತೂರಿ ರಂಗನ್‌ ವರದಿ ಜಾರಿ ಬಗ್ಗೆ ಜನ ಪ್ರತಿನಿಧಿಗಳು ಮತ್ತು ಸಾರ್ವಜನಿಕರ ಅಹವಾಲು ಆಲಿಸಿ ರಾಜ್ಯ ಸರ್ಕಾರ ತಿರಸ್ಕರಿಸಿದೆ. ಆದರೂ ಮತ್ತೊಮ್ಮೆ ಪರಿಶೀಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಮತ್ತೊಮ್ಮೆ ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯಲ್ಲಿ ಹವಾಮಾನ ಬದಲಾವಣೆ ಪ್ರಯೋಗಾಲಯ ಸ್ಥಾಪಿಸಿದ್ದು, ಇದರಿಂದಾಗ ಹವಾಮಾನ ಬದಲಾವಣೆ ಕುರಿತು ವಿಶ್ಲೇಷಣೆ ನಡೆಸಲು ಸಹಕಾರಿಯಾಗಿದೆ, ಪ್ಲಾಸ್ಟಿಕ್‌ನಿಂದ ಉಂಟಾಗುವ ಹಾನಿ ಕುರಿತಂತೆ ಜಾಗೃತಿ ಮೂಡಿಸಲು ರಾಜ್ಯದ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಬೀದಿ ನಾಟಕ ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಎಲ್ಲ ಮೃಗಾಲಯಗಳಿಗೆ ಒಂದೇ ವೆಬ್‌ಸೈಟ್‌

ರಾಜ್ಯ ಮೃಗಾಲಯ ಪ್ರಾಧಿಕಾರ ವ್ಯಾಪ್ತಿಯಲ್ಲಿರುವ ಒಂಬತ್ತು ಮೃಗಾಲಯಗಳ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್‌ಗೆ ಸಚಿವ ಆರ್‌. ಶಂಕರ್‌ ಚಾಲನೆ ನೀಡಿದರು. ಮೈಸೂರು, ಬನ್ನೇರುಘಟ್ಟ, ಬಳ್ಳಾರಿ, ಕಲಬುರಗಿ, ದಾವಣಗೆರೆ, ಗದಗ, ಹೊಸಪೇಟೆ ಮತ್ತು ಕಮಲಾಪುರದಲ್ಲಿರುವ ಮೃಗಾಲಯಗಳ ಬಗ್ಗೆ ಎಲ್ಲ ಮಾಹಿತಿಗಳು ವೆಬ್‌ಸೈಟ್‌ನಲ್ಲಿ ದೊರೆಯಲಿವೆ. ಕೆಲವು ಮೃಗಾಲಯಗಳಲ್ಲಿ ಇನ್ನೂ ಹೆಚ್ಚಿನ ಮೂಲಭೂತ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

Follow Us:
Download App:
  • android
  • ios