ಸುವರ್ಣಸೌಧ :  ವಿದೇಶ ಪ್ರವಾಸ ಮೊಟಕುಗೊಳಿಸಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಠಾತ್‌ ರಾಜ್ಯಕ್ಕೆ ಹಿಂತಿರುಗುತ್ತಿದ್ದಂತೆಯೇ ಕಾಂಗ್ರೆಸ್‌ ಪಕ್ಷದಲ್ಲಿ ಭಾರಿ ಚಟುವಟಿಕೆಗಳು ಆರಂಭಗೊಂಡಿದ್ದು, ಇದೇ ಮೊದಲ ಬಾರಿಗೆ ಪಕ್ಷದಲ್ಲಿ ಬಹಿರಂಗವಾಗಿ ಗುಂಪುಗಾರಿಕೆ ಗೋಚರವಾಗತೊಡಗಿದೆ.

ಸರ್ಕಾರದ ಉನ್ನತ ಸ್ಥಾನಗಳನ್ನು ತಮ್ಮ ಬೆಂಬಲಿಗರಿಗೆ ದೊರಕಿಸಿಕೊಡುವ ಹಿರಿಯ ನಾಯಕರ ಧೋರಣೆ ವಿರುದ್ಧ ಪಕ್ಷದ ಶಾಸಕರು ಒಗ್ಗೂಡತೊಡಗಿದ್ದು, ಮೂರಕ್ಕೂ ಹೆಚ್ಚು ಪ್ರಭಾವಿ ಗುಂಪುಗಳು ರೂಪುಗೊಂಡ ಲಕ್ಷಣ ಕಾಣತೊಡಗಿದೆ. ಮುಖ್ಯವಾಗಿ ಸಭಾಪತಿ ಹುದ್ದೆ ಉತ್ತರ ಕರ್ನಾಟಕದ ಹಿರಿಯ ಶಾಸಕ ಎಸ್‌.ಆರ್‌. ಪಾಟೀಲ್‌ ಅವರ ಕೈತಪ್ಪಿದ ಬೆನ್ನಲ್ಲೇ ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾದ ಎಂ.ಬಿ. ಪಾಟೀಲ್‌, ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರ ಗುಂಪು ರೂಪುಗೊಂಡಿದ್ದು, ಈ ಗುಂಪು ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ಸರ್ಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆಯಲು ಹೈಕಮಾಂಡ್‌ ಮಟ್ಟಕ್ಕೂ ದೂರು ಒಯ್ಯಲು ಸಜ್ಜಾಗಿದೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡವಳಿಕೆಯಿಂದ ರೋಸಿಹೋಗಿರುವ ಹಿರಿಯ ಶಾಸಕರ ಗುಂಪೊಂದು ರಾಮಲಿಂಗಾರೆಡ್ಡಿ, ರೋಷನ್‌ಬೇಗ್‌ ನೇತೃತ್ವದಲ್ಲಿ ಒಗ್ಗೂಡತೊಡಗಿದ್ದು, ಡಿ.18ರಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯನ್ನು ಬಹಿಷ್ಕರಿಸುವ ಅಥವಾ ಪಾಲ್ಗೊಂಡರೂ ದೊಡ್ಡ ಧ್ವನಿಯಲ್ಲಿ ನಾಯಕತ್ವದ ವಿರುದ್ಧ ಧ್ವನಿಯೆತ್ತುವ ಮೂಲಕ ಭಿನ್ನರಾಗ ಹಾಡಲು ಸಜ್ಜಾಗಿದೆ.

ಇದರ ನಡುವೆಯೇ, ಕಾಂಗ್ರೆಸ್‌ನ ಮೇಲ್ವರ್ಗಕ್ಕೆ ಸೇರಿದ ಕಿರಿಯ ಶಾಸಕರ ಗುಂಪು ಸಹ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಒಗ್ಗೂಡುವ ಬಗ್ಗೆ ಚರ್ಚೆ ಆರಂಭಿಸಿದೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಕೆಲ ಶಾಸಕರು ಈ ಗುಂಪಿನಲ್ಲಿದ್ದು, ಶೀಘ್ರವೇ ಸಭೆ ಸೇರುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಈ ಗುಂಪು ಇನ್ನೂ ಸಕ್ರಿಯ ಚಟುವಟಿಕೆ ಆರಂಭಿಸಿಲ್ಲ.

ಎಂಬಿಪಾ ಗುಂಪು ಹೆಚ್ಚು ಕ್ರಿಯಾಶೀಲ:

ಈ ಮೂರು ಗುಂಪುಗಳ ಪೈಕಿ ಅತ್ಯಂತ ಸಕ್ರಿಯವಾಗಿರುವುದು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಅಳಲಿನೊಂದಿಗೆ ಒಗ್ಗೂಡುತ್ತಿರುವ ಉತ್ತರ ಕರ್ನಾಟಕದ ಶಾಸಕರ ಗುಂಪು. ಈ ಗುಂಪಿಗೆ ಎಂ.ಬಿ. ಪಾಟೀಲ್‌ ಹಾಗೂ ಸತೀಶ್‌ ಜಾರಕಿಹೊಳಿ ನಾಯಕತ್ವ ವಹಿಸಿದ್ದು, ಗುರುವಾರ ಈ ಶಾಸಕರ ಗುಂಪು ಮೊಗಸಾಲೆಯಲ್ಲಿ ಅನೌಪಚಾರಿಕ ಚರ್ಚೆಯನ್ನು ನಡೆಸಿತು.

ಕೆಪಿಸಿಸಿ ಅಧ್ಯಕ್ಷ, ಸಮನ್ವಯ ಸಮಿತಿ, ಸ್ಪೀಕರ್‌, ಸಭಾಪತಿ ಸೇರಿದಂತೆ ಸರ್ಕಾರದ ಬಹುತೇಕ ಎಲ್ಲಾ ಪ್ರಮುಖ ಸ್ಥಾನಗಳನ್ನು ದಕ್ಷಿಣ ಕರ್ನಾಟಕದ ಶಾಸಕರೇ ಲಪಟಾಯಿಸುತ್ತಿದ್ದಾರೆ ಎಂಬುದು ಈ ಶಾಸಕರ ದೂರು. ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ, ರಾಜಕೀಯ ಕಾರ್ಯದರ್ಶಿಗಳ ಹುದ್ದೆ ನೇಮಕದ ವೇಳೆಗಾದರೂ ಉತ್ತರ ಕರ್ನಾಟಕದ ಶಾಸಕರಿಗೆ ಹುದ್ದೆಗಳು ದೊರಕುವಂತೆ ಮಾಡಲು ರಾಜ್ಯ ನಾಯಕತ್ವ ಹಾಗೂ ಹೈಕಮಾಂಡ್‌ ಮೇಲೆ ಒತ್ತಡ ನಿರ್ಮಾಣ ಮಾಡುವ ದೃಷ್ಟಿಯಿಂದ ಈ ಗುಂಪು ಒಗ್ಗೂಡತೊಡಗಿದೆ ಎಂದು ಈ ಗುಂಪಿನ ಹಿರಿಯ ಶಾಸಕರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಡಿ.18ರಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಧ್ವನಿಯೆತ್ತಲು ಈ ಗುಂಪು ಈಗಾಗಲೇ ನಿರ್ಧರಿಸಿದೆ. ಅಗತ್ಯಬಿದ್ದರೆ ಹೈಕಮಾಂಡ್‌ ಮಟ್ಟಕ್ಕೂ ತಮ್ಮ ಅಳಲನ್ನು ತೆಗೆದುಕೊಂಡು ಹೋಗುವುದು ಈ ಗುಂಪಿನ ಉದ್ದೇಶ ಎಂದು ಹೇಳಲಾಗಿದೆ.

ರಾಮಲಿಂಗಾರೆಡ್ಡಿ, ಎಚ್‌ಕೆ ಗುಂಪು:

ಹಿರಿಯರಾದ ರಾಮಲಿಂಗಾರೆಡ್ಡಿ, ರೋಷನ್‌ಬೇಗ್‌, ಎಚ್‌.ಕೆ. ಪಾಟೀಲ್‌, ಎಚ್‌.ಎಂ. ರೇವಣ್ಣ, ಎಂ.ಟಿ.ಬಿ. ನಾಗರಾಜ್‌ ಸೇರಿದಂತೆ ಹಲವರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಧೋರಣೆ ಬಗ್ಗೆಯೇ ಸಿಟ್ಟಾಗಿದ್ದಾರೆ. ಪಕ್ಷದ ಯಾವುದೇ ತೀರ್ಮಾನಗಳಲ್ಲೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ತಮ್ಮ ಅಸಮಾಧಾನವನ್ನು ತೋರ್ಪಡಿಸುವುದು ಈ ಗುಂಪಿನ ಉದ್ದೇಶ ಎಂದು ಮೂಲಗಳು ಹೇಳಿವೆ.

ಹಾಲಿ ಸಚಿವರ ಕೈಬಿಡುವ ಬಗ್ಗೆ ಚರ್ಚೆಯೇ ಆಗಿಲ್ಲ

ಸಚಿವ ಸಂಪುಟ ವಿಸ್ತರಣೆಯು ಮತ್ತೊಮ್ಮೆ ಮುಂದೂಡಿಕೆಯಾಗುವ ಸಾಧ್ಯತೆಗಳೇ ಹೆಚ್ಚಿರುವ ಕಾರಣ ಹಾಲಿ ಸಚಿವರ ಪೈಕಿ ಕೆಲವರನ್ನು ಕೈಬಿಡುವ ಅಥವಾ ಹಿರಿಯ ಸಚಿವರನ್ನು ಪಕ್ಷದ ಕೆಲಸಕ್ಕೆ ಕಳುಹಿಸಿಕೊಟ್ಟು ಹೊಸಬರಿಗೆ ನೀಡುವಂತಹ ಸಾಧ್ಯತೆಗಳ ಬಗ್ಗೆ ಪಕ್ಷದ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಸೇರ್ಪಡೆಗೆ ಅರ್ಹತೆ ಹೊಂದಿರುವವರ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಸಂಪುಟ ರಚನೆ ವೇಳೆಯೇ ಹಾಲಿ ಸಚಿವರಿಗೆ ಎರಡು ವರ್ಷದ ಅವಧಿ ನೀಡಿ, ಅನಂತರ ಅವರು ರಾಜೀನಾಮೆ ನೀಡಬೇಕು ಮತ್ತು ಅನಂತರ ಸಚಿವರಾದವರಿಗೆ ಮೂರು ವರ್ಷ ಅಧಿಕಾರ ನೀಡಬೇಕು ಎಂಬ ತೀರ್ಮಾನವಾಗಿದೆ. ಇದೇ ಈಗಲೂ ಅನ್ವಯವಾಗುತ್ತಿದೆ. ಇದರ ಹೊರತಾಗಿ ಬೇರೆ ಯಾವ ಬದಲಾವಣೆ ಬಗ್ಗೆಯೂ ಪಕ್ಷದ ಮಟ್ಟದಲ್ಲಿ ಚರ್ಚೆಯಾಗಿಲ್ಲ.

ಒಂದು ವೇಳೆ ಇಂತಹ ಆಗ್ರಹ ಶಾಸಕರಿಂದ ಬಂದರೂ ಲೋಕಸಭೆ ಚುನಾವಣೆ ಸಾಮೀಪ್ಯ ಹಿನ್ನೆಲೆಯಲ್ಲಿ ಇಂತಹ ಬೇಡಿಕೆಗಳನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂದು ಪಕ್ಷದ ಉನ್ನತ ನಾಯಕರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

ಪರಂಗೆ ಸಿದ್ದು ಬೆಂಬಲಿಗರ ತರಾಟೆ

ಸಭಾಪತಿ ಹುದ್ದೆಯನ್ನು ಸಿದ್ದರಾಮಯ್ಯ ಬಣದಲ್ಲಿದ್ದ ಎಸ್‌.ಆರ್‌. ಪಾಟೀಲ್‌ ಅವರಿಗೆ ತಪ್ಪಿಸಲು ಮುಖ್ಯ ಕಾರಣ ಎಂದು ಹೇಳಲಾಗುತ್ತಿರುವ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರನ್ನು ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಬುಧವಾರ ವಿಧಾನಸಭೆ ಮುಕ್ತಾಯಗೊಂಡ ಬಳಿಕ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಸಿದ್ದರಾಮಯ್ಯ ಬೆಂಬಲಿಗರ ಶಾಸಕರ ಗುಂಪು ಪರಮೇಶ್ವರ್‌ ಅವರನ್ನು ಭೇಟಿ ಮಾಡಿ, ಪೂರ್ವ ನಿರ್ಧಾರವಾದಂತೆ ಎಸ್‌.ಆರ್‌. ಪಾಟೀಲ್‌ ಅವರಿಗೆ ಸಭಾಪತಿ ನೀಡಿದ್ದರೆ ಪಕ್ಷದಲ್ಲಿ ಗೊಂದಲ ನಿರ್ಮಾಣವಾಗುತ್ತಿರಲಿಲ್ಲ. ಆದರೆ, ಈಗ ಪಕ್ಷದಲ್ಲಿ ಗುಂಪುಗಾರಿಕೆ ಆರಂಭಗೊಂಡಿದೆ. ಉತ್ತರ ಕರ್ನಾಟಕದ ಶಾಸಕರು ಅಸಮಾಧಾನಗೊಂಡಿದ್ದಾರೆ. ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆಗಳು ಆರಂಭಗೊಂಡಿವೆ ಎಂದು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಶಾಸಕರ ಈ ಆಕ್ರೋಶಕ್ಕೆ ಪರಮೇಶ್ವರ್‌ ಯಾವುದೇ ಪ್ರತಿಕ್ರಿಯೆ ನೀಡದೆ ಶಾಸಕಾಂಗ ಪಕ್ಷದಲ್ಲಿ ಚರ್ಚಿಸೋಣ ಎಂದು ಹೊರನಡೆದರು ಎಂದು ಮೂಲಗಳು ಹೇಳಿವೆ.

ಯಾವ ಬಣ? ಏನು ಅತೃಪ್ತಿ?

1. ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ: ಕೆಪಿಸಿಸಿ ಅಧ್ಯಕ್ಷ, ಸಮನ್ವಯ ಸಮಿತಿ, ಸ್ಪೀಕರ್‌, ಸಭಾಪತಿ ಸೇರಿ ಪ್ರಮುಖ ಹುದ್ದೆಗಳು ದಕ್ಷಿಣ ಕರ್ನಾಟಕದ ಶಾಸಕರ ಪಾಲಾಗುತ್ತಿದೆ ಎಂದು ಆಕ್ರೋಶ. ಸಂಪುಟ ವಿಸ್ತರಣೆ, ರಾಜಕೀಯ ಕಾರ್ಯದರ್ಶಿ ನೇಮಕ ವೇಳೆ ಉತ್ತರ ಕರ್ನಾಟಕಕ್ಕೆ ಆದ್ಯತೆ ಹೆಚ್ಚಿಸಲು ಲಾಬಿ

2. ರಾಮಲಿಂಗಾರೆಡ್ಡಿ, ರೋಷನ್‌ ಬೇಗ್‌: ಪಕ್ಷದ ಪ್ರಮುಖ ನಿರ್ಧಾರಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ರಾಮಲಿಂಗಾರೆಡ್ಡಿ, ಬೇಗ್‌ ಸೇರಿದಂತೆ ಕಾಂಗ್ರೆಸ್‌ ಹಿರಿಯ ನಾಯಕರಾದ ಎಚ್‌.ಕೆ. ಪಾಟೀಲ್‌, ಎಚ್‌.ಎಂ.ರೇವಣ್ಣ, ಎಂ.ಟಿ.ಬಿ.ನಾಗರಾಜ್‌ಗೆ ಸಿದ್ದು ವಿರುದ್ಧವೇ ಅಸಮಾಧಾನ

3. ಮೇಲ್ವರ್ಗದ ಕಿರಿಯ ಶಾಸಕರ ಗುಂಪು: ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಒಗ್ಗೂಡುವ ಬಗ್ಗೆ ಚರ್ಚೆ ಆರಂಭ. ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಕೆಲ ಶಾಸಕರು ಈ ಗುಂಪಿನಲ್ಲಿದ್ದು, ಶೀಘ್ರವೇ ಸಭೆ ಸೇರುವ ಬಗ್ಗೆ ಚರ್ಚೆ. ಆದರೆ, ಈ ಗುಂಪಿನಿಂದ ಇನ್ನೂ ಆರಂಭವಾಗದ ಸಕ್ರಿಯ ಚಟುವಟಿಕೆ

ಸಂಪುಟ ರಚನೆ, ಪ್ರಮುಖ ಹುದ್ದೆಗಳ ನೇಮಕ, ಅನುದಾನ ಹಂಚಿಕೆ ಸೇರಿದಂತೆ ಪ್ರತಿ ವಿಷಯದಲ್ಲೂ ಉ-ಕ ಭಾಗಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಇದೀಗ ಎಸ್‌.ಆರ್‌. ಪಾಟೀಲ್‌ ಅವರಿಗೆ ವಿಧಾನಪರಿಷತ್‌ ಸಭಾಪತಿ ಹುದ್ದೆ ತಪ್ಪಿಸಿ ಮತ್ತೊಮ್ಮೆ ತಾರತಮ್ಯ ಮಾಡಲಾಗಿದೆ. ಇದನ್ನು ಡಿ.18ರ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಶ್ನಿಸುತ್ತೇವೆ.

- ಎಂ.ಬಿ.ಪಾಟೀಲ್‌, ಮಾಜಿ ಸಚಿವ