ಕರ್ನಾಟಕ ಕರಾವಳಿಯ ಜನಪ್ರಿಯ ಜನಪದ ಕ್ರೀಡೆ ಕಂಬಳಕ್ಕೆ ಅವಕಾಶ ಮಾಡಿ ಕೊಡಲು ಪ್ರಾಣಿ ಹಿಂಸೆ ತಡೆ ಕಾಯ್ದೆ -1960 ಗೆ ತಿದ್ದುಪಡಿ ತರುವಂತೆ ರಾಜ್ಯ ಸಚಿವ ಸಂಪುಟ ತಂದಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದೆ.

ನವದೆಹಲಿ (ಜು.03): ಕರ್ನಾಟಕ ಕರಾವಳಿಯ ಜನಪ್ರಿಯ ಜನಪದ ಕ್ರೀಡೆ ಕಂಬಳಕ್ಕೆ ಅವಕಾಶ ಮಾಡಿ ಕೊಡಲು ಪ್ರಾಣಿ ಹಿಂಸೆ ತಡೆ ಕಾಯ್ದೆ -1960 ಗೆ ತಿದ್ದುಪಡಿ ತರುವಂತೆ ರಾಜ್ಯ ಸಚಿವ ಸಂಪುಟ ತಂದಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದೆ.
ಪ್ರಾಣಿಹಿಂಸೆಯ ಕಾರಣ ನೀಡಿ ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿತ್ತು. ಇದೇ ಮಾನದಂಡವನ್ನು ಅನ್ವಯಿಸಿ ರಾಜ್ಯದ ಕಂಬಳ ಕ್ರೀಡೆಗೂ ನಿಷೇಧ ಬಿಸಿ ತಟ್ಟಿತ್ತು. ಬಳಿಕ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಕ್ರೀಡೆಗೆ ಮಾನ್ಯತೆ ನೀಡಲು ಕಾನೂನಿನ ಮೊರೆ ಹೋಗಿತ್ತು. ಅದೇ ರೀತಿ ಕರ್ನಾಟಕ ರಾಜ್ಯ ಕ್ಯಾಬಿನೆಟ್ ಕೂಡ ಜನರ ಹೋರಾಟಕ್ಕೆ ಮಣಿದು ಕಂಬಳ ಕ್ರೀಡೆಗೆ ಅವಕಾಶ ನೀಡುವ ತಿದ್ದುಪಡಿ ವಿಧೇಯಕಕ್ಕೆ ಜ.28 ರಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಈ ಸುಗ್ರೀವಾಜ್ಞೆ ಯನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಫೆ.13 ರಂದು ಕಳುಹಿಸಿಕೊಟ್ಟಿದ್ದರು. ಕೇಂದ್ರ ಗೃಹ ಇಲಾಖೆಯು ಈ ಬಗ್ಗೆ ತಮ್ಮ ಅಭಿಪ್ರಾಯ ನೀಡುವಂತೆ ಕೇಂದ್ರ ಕಾನೂನು ಸಚಿವಾಲಯ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ಸೂಚಿಸಿತ್ತು. ಈ ಸಚಿವಾಲಯಗಳು ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ರಾಜ್ಯ ಸರ್ಕಾರದಿಂದ ಕೇಳಿದ್ದು, ರಾಜ್ಯ ಸರ್ಕಾರ ಕೇಂದ್ರ ಕೇಳಿದ ಮಾಹಿತಿಯನ್ನು ಒದಗಿಸಿತ್ತು.
ಸೋಮವಾರ ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದ್ದು ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿನ ಕಂಬಳ ನಿಷೇಧದ ತೂಗುಗತ್ತಿ ಬದಿಗೆ ಸರಿದಿದೆ.
ಕಂಬಳದ ವಿಶೇಷ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ ಹಾಕಿರುವುದು ಕರಾವಳಿ ಮಾತ್ರವಲ್ಲ, ಇಡೀ ರಾಜ್ಯದ ಜನರ ಗೆಲುವಾಗಿದೆ. ಇದು ವಿಜಯದ ಸಂಕೇತ, ಜನರ ಆಸೆ ಕೊನೆಗೂ ಈಡೇರಿದೆ. ಜನರು ಮತ್ತು ಜನಪ್ರತಿನಿಧಿಗಳು ಕಂಬಳದ ಕುರಿತು ಒಗ್ಗಟ್ಟಾಗಿ ಹೋರಾಟ ನಡೆಸಿದ ಫಲ ಈಗ ಸಿಕ್ಕಿದೆ. ಜನರ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಕಂಬಳಕ್ಕೆ ಗ್ರೀನ್ ಸಿಗ್ನಲ್ ದೊರೆತಿರುವುದೇ ಸಾಕ್ಷಿ. ಪೇಟಾಕ್ಕೆ ಇನ್ನು ಕಾನೂನು ಹೋರಾಟ ಮಾಡುವ ಅವಕಾಶ ಕಡಿಮೆಯಾಗಿದ್ದು, ಕರಾವಳಿಯ ಜಾನಪದ ಕ್ರೀಡೆಯ ಆತಂಕಗಳೆಲ್ಲವೂ ನಿವಾರಣೆಯಾದಂತಾಗಿದೆ.
- ಅಶೋಕ್ ರೈ, ಕಂಬಳ ಸಂಘಟಕ, ಮಂಗಳೂರು