ನವದೆಹಲಿ[ಸೆ.06]: ದೀಪಾವಳಿ ವೇಳೆ ಸಿಡಿಸುವ ಪಟಾಕಿಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದೇ ಮೊದಲ ಬಾರಿಗೆ ಹಸಿರು ಪಟಾಕಿಗಳನ್ನು ಪರಿಚಯಿಸಿದೆ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಶನಿವಾರ ದೆಹಲಿಯಲ್ಲಿ ಹಸಿರು ಪಟಾಕಿಗಳನ್ನು ಬಿಡುಗಡೆ ಮಾಡಿದ್ದು, ಭಾವನೆ ಹಾಗೂ ಪರಿಸರಕ್ಕೆ ಅಡ್ಡಿಯಾಗದಂತೆ ಪರಿಸರ ಸ್ನೇಹಿ ಪಟಾಕಿಗಳನ್ನು ಪರಿಚಯಿಸಲಾಗುತ್ತಿದೆ ಎಂದರು.

ವೈಜ್ಞಾನಿಕ ಹಾಗೂ ಕೈಗಾರಿಕ ಸಂಶೋಧನ ಕೌನ್ಸಿಲ್‌ ಈ ಹಸಿರು ಪಟಾಕಿಗಳನ್ನು ತಯಾರಿಸಿದ್ದು, ಇವುಗಳಿಂದ ಶೇ.30 ರಷ್ಟುಮಾಲಿನ್ಯ ಕಡಿಮೆಯಾಗಲಿದೆ. ಅಲ್ಲದೇ ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಕೆಮಿಕಲ್‌ಗಳು ಬಳಸುವುದರಿಂದ ಇವುಗಳ ಬೆಲೆ ಕೂಡ ಕಡಿಮೆ ಇರಲಿದೆ. ಆದರೆ ನಿಖರ ಬೆಲೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

2018ರಲ್ಲಿ ದೀಪಾವಳಿಗಿಂತ ಕೆಲವೇ ದಿನಗಳ ಮುಂಚೆ ಮಾಲಿನ್ಯ ಉಂಟು ಮಾಡುವ ಪಟಾಕಿಗಳ ತಯಾರಿ ಹಾಗೂ ಮಾರಾಟವನ್ನು ನಿಷೇಧಿಸಿ ಸುಪ್ರೀಂ ಕೋರ್ಟ್‌ ಅದೇಶ ಹೊರಡಿಸಿತ್ತು. ಹಾಗಾಗಿ ಹಸಿರು ಪಟಾಕಿಗಳನ್ನು ತಯಾರಿಸಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕೇಂದ್ರದ ಈ ನಿಲುವಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.