ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಇಸ್ರೋ ಮಾಡಿದ ಪ್ರತಿಯೊಂದು ಸಾಧನೆಯಲ್ಲೂ ಪ್ರೊ| ರಾವ್ ಹೆಜ್ಜೆ ಗುರುತು ಇದೆ. ಇಸ್ರೋದ ಎಲ್ಲಾ ಯೋಜನೆಗಳಲ್ಲಿ ರಾವ್ ಒಂದಿಲ್ಲೊಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದು ವಿಶೇಷ. ಆರ್ಯಭಟ ಉಪಗ್ರಹದಿಂದ ಹಿಡಿದು ಇತ್ತೀಚಿನ ಮಂಗಳಯಾನದವರೆಗೆ ಪ್ರೊ| ರಾವ್ ಕಾರ್ಯನಿರ್ವಹಿಸಿದ್ದಾರೆ.
ಬೆಂಗಳೂರು(ಜುಲೈ 24): ದೇಶದ ಅತ್ಯುತ್ತಮ ಬಾಹ್ಯಾಕಾಶ ವಿಜ್ಞಾನಿಗಳ ಪೈಕಿ ಒಬ್ಬರೆನಿಸಿದ್ದ ಪ್ರೊ| ಯು.ಆರ್.ರಾವ್ ವಿಧಿವಶರಾಗಿದ್ದಾರೆ. 85 ವರ್ಷದ ಯು.ಆರ್.ರಾವ್ ರಾತ್ರಿ 2:30ರ ವೇಳೆ ಇಂದಿರಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ರಾವ್ ಅವರು ಹಲವು ವರ್ಷಗಳಿಂದ ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದರೆನ್ನಲಾಗಿದೆ.
ಉಡುಪಿ ಸಂಜಾತರು...
ಕೃಷ್ಣವೇಣಿ ಅಮ್ಮ ಮತ್ತು ಲಕ್ಷ್ಮೀನಾರಾಯಣ ಆಚಾರ್ಯ ದಂಪತಿಯ ಪುತ್ರನಾದ ಯು.ಆರ್.ರಾವ್ ಜನಿಸಿದ್ದು 1932, ಮಾರ್ಚ್ 10ರಂದು ಉಡುಪಿಯ ಅದಮಾರು ಗ್ರಾಮದಲ್ಲಿ. ಅದಮಾರಿನಲ್ಲೇ ಪ್ರಾಥಮಿಕ ಶಾಲಾ ಶಿಕ್ಷಣ ಪಡೆದ ಪಡೆದ ಅವರು ಉಡುಪಿಯ ಕ್ರಿಶ್ಚಿಯನ್ ಸ್ಕೂಲ್'ನಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಆಂಧ್ರದ ಅನಂತಪುರ್'ನ ಜಿಎಎಸ್ ಕಾಲೇಜಿನಲ್ಲಿ ಬಿಎಸ್ಸಿ, ಬನಾರಸ್ ಹಿಂದೂ ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದರು. ಡಾ. ವಿಕ್ರಮ್ ಸಾರಾಭಾಯ್ ಮಾರ್ಗದರ್ಶನದಲ್ಲಿ ಅಹ್ಮದಾಬಾದ್'ನ ಫಿಸಿಕಲ್ ರೀಸರ್ಚ್ ಲ್ಯಾಬ್'ನಲ್ಲಿ ಪಿಎಚ್'ಡಿ ಪಡೆದರು.
ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಇಸ್ರೋ ಮಾಡಿದ ಪ್ರತಿಯೊಂದು ಸಾಧನೆಯಲ್ಲೂ ಪ್ರೊ| ರಾವ್ ಹೆಜ್ಜೆ ಗುರುತು ಇದೆ. ಇಸ್ರೋದ ಎಲ್ಲಾ ಯೋಜನೆಗಳಲ್ಲಿ ರಾವ್ ಒಂದಿಲ್ಲೊಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದು ವಿಶೇಷ. ಆರ್ಯಭಟ ಉಪಗ್ರಹದಿಂದ ಹಿಡಿದು ಇತ್ತೀಚಿನ ಮಂಗಳಯಾನದವರೆಗೆ ಪ್ರೊ| ರಾವ್ ಕಾರ್ಯನಿರ್ವಹಿಸಿದ್ದಾರೆ. ಶುಕ್ರ ಗ್ರಹಕ್ಕೆ ಉಪಗ್ರಹ ಕಳುಹಿಸುವ ಇಸ್ರೋದ ಭವಿಷ್ಯದ ಯೋಜನೆಯಲ್ಲೂ ರಾವ್ ಪಾತ್ರವಿದೆ. ಬಾಹ್ಯಾಕಾಶ ವಿಜ್ಞಾನ ಹಾಗೂ ರಾಕೆಟ್ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಮಾಡಿರುವ ಅದ್ವಿತೀಯ ಸಾಧನೆಯ ಪ್ರಮುಖ ಶಿಲ್ಪಿ ಪ್ರೊ| ರಾವ್ ಅವರೇ ಎಂದರೆ ಅತಿಶಯೋಕ್ತಿಯಲ್ಲ.
ಯುಆರ್ ರಾವ್ ಪ್ರಮುಖ ಗೌರವ:
* ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ವಿಜೇತರು
* ಅಮೆರಿಕದ ಪ್ರತಿಷ್ಠಿತ "ಸೆಟಿಲೈಟ್ ಹಾಲ್ ಆಫ್ ಫೇಮ್" ಗೌರವ
* ಅಂತಾರಾಷ್ಟ್ರೀಯ ಆಸ್ಟ್ರೋನಾಟ್ಸ್ ಸಂಸ್ಥೆಯಿಂದ ಗೌರವ
* ಸೋವಿಯತ್ ರಷ್ಯಾದಿಂದ ಯೂರಿ ಗಗಾರಿನ್ ಪ್ರಶಸ್ತಿ
* ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ; ನಾಡೋಜ ಪ್ರಶಸ್ತಿ; ಆರ್ಯಭಟ ಪ್ರಶಸ್ತಿ
* ಸೋವಿಯತ್ ರಷ್ಯಾದ ಅಕಾಡೆಮಿ ಆಫ್ ಸೈನ್ಸಸ್'ನಿಂದ ಗೌರವ ಪದಕ
