ನವದೆಹಲಿ(ಅ.1): ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಕಾರ್ಯಕ್ರಮ ಸ್ವಚ್ಛ ಭಾರತ ಅಭಿಯಾನಕ್ಕೆ ಭಾನುವಾರ ಎರಡು ವರ್ಷಗಳಾಗುತ್ತಿವೆ. ಆದರೆ ಈ ಅಭಿಯಾನಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಮೂರು ಬಿಜೆಪಿ ಆಡಳಿತ ರಾಜ್ಯಗಳು ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಮಾತ್ರ ಕಣ್ಣಿಗೆ ಕಾಣುವಂಥ ಬದಲಾವಣೆ ಕಂಡಿದೆ ಎಂದು ಐದನೇ ಓರ್ವ ವ್ಯಕ್ತಿಯು ಅಭಿಪ್ರಾಯ ಪಟ್ಟಿರುವುದಾಗಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಸಮೀಕ್ಷೆಯೊಂದರಲ್ಲಿ ತಿಳಿದುಬಂದಿದೆ. ಈ ಬಗ್ಗೆ ‘ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಇಂಡಿಯಾ ಸ್ಪೆಂಡ್ ವೆಬ್ ವಾಹಿನಿ ನಡೆಸಿರುವ ಇನ್ನೊಂದು ಪ್ರತ್ಯೇಕ ಸಮೀಕ್ಷೆಯಲ್ಲಿ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್‌ನಲ್ಲಿ ಶೌಚಾಲಯ ವ್ಯವಸ್ಥೆ ತೀವ್ರ ಶೋಚನೀಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಶೌಚಾಲಯ ನಿರ್ಮಾಣಕ್ಕೆ 32 ವರ್ಷಗಳು ಬೇಕಾಗಬಹುದು. ರಾಜನಾಥ ಸಿಂಗ್ ಕ್ಷೇತ್ರದಲ್ಲಿ 35 ವರ್ಷ, ಸುಷ್ಮಾ ಸ್ವರಾಜ್ ಕ್ಷೇತ್ರದಲ್ಲಿ 8 ವರ್ಷ ಪೂರ್ಣ ಪ್ರಮಾಣದಲ್ಲಿ ಶೌಚಾಲಯ ನಿರ್ಮಾಣಕ್ಕೆ ಬೇಕಾಗಬಹುದು ಲೋಕಲ್ ಸರ್ಕಲ್ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.
ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್‌ಗಳಲ್ಲಿ ಶೇ. 23 ಮನೆಗಳಲ್ಲಿ ಮಾತ್ರ ಶೌಚಾಲಯ ಬಳಸುತ್ತಾರೆ. 15 ವರ್ಷಗಳಲ್ಲಿ ಇದು ಶೇ. 2ರಷ್ಟು ಮಾತ್ರ ಏರಿಕೆ ಕಂಡಿದೆ. ಮಧ್ಯಪ್ರದೇಶದಲ್ಲಿ ಶೇ. 30ರಷ್ಟು ಸುಧಾರಣೆಯಾಗಿದೆ ಎಂದು ಲೋಕಲ್ ಸರ್ಕಲ್ಸ್ ಸಮೀಕ್ಷೆ ತಿಳಿಸಿದ್ದರೆ, ಇಂಡಿಯಾ ಸ್ಪೆಂಡ್ ಸಮೀಕ್ಷೆ ಪ್ರಕಾರ, ಶೇ. 2ರಷ್ಟು ಮಾತ್ರ ಸುಧಾರಣೆ ಕಂಡಿದೆ.
ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ನೈರ್ಮಲ್ಯ ವ್ಯವಸ್ಥೆಯ ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ‘ಲೋಕಲ್ ಸರ್ಕಲ್’ಎಸ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆ ತಿಳಿಸಿದೆ. ಆದರೆ ದೆಹಲಿ, ಉತ್ತರ ಪ್ರದೇಶ, ಪಂಜಾಬ್ ಮತ್ತು ಬಿಹಾರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಉಳಿದ ರಾಜ್ಯಗಳಲ್ಲಿ ಕೊಂಚ ಬದಲಾವಣೆಗಳಾಗಿವೆ.
ನಿಧಾನಗತಿಯ ಬದಲಾವಣೆಯಾಗುತ್ತಿದೆ ಎಂದು ಸಮೀಕ್ಷೆ ತೋರಿಸುತ್ತಿದೆ. ಆದರೆ ಮುನ್ಸಿಪಾಲಿಟಿಗಳು ಇನ್ನೂ ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕಾಗಿವೆ. ಮುನ್ಸಿಪಾಲಿಟಿಗಳು ನಾಗರಿಕರು ಅಥವಾ ಮಿಶನ್‌ನೊಂದಿಗೆ ಇನ್ನೂ ಪೂರ್ಣವಾಗಿ ತೊಡಗಿಸಿಕೊಂಡಿಲ್ಲ ಎಂದು ಲೋಕಲ್ ಸರ್ಕಲ್ಸ್‌ನ ಮುಖ್ಯ ತಾಂತ್ರಿಕ ಅಕಾರಿ ಕೆ ಯತೀಶ್ ರಜವತ್ ಹೇಳುತ್ತಾರೆ.
ಶೇ. 71 ಮಂದಿ ಬಳಿ ಸ್ಥಳೀಯಾಡಳಿತ ಸಂಸ್ಥೆಯ ಒನ್ ನಂಬರ್ ಕೂಡ ಇಲ್ಲ. ಶೇ. 87 ಮಂದಿ ತಮ್ಮ ನಗರದಲ್ಲಿ ಪ್ಲಾಸ್ಟಿಕ್ ಅಥವಾ ಅಪಾಯಕಾರಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ. ಸ್ವಚ್ಛಭಾರತ ಅಭಿಯಾನದ ಬಳಿಕ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಸುಧಾರಣೆಯಾಗಿದೆ ಎಂದು ಕೇವಲ ಐದನೇ ಒಂದು ಮಂದಿ ಮಾತ್ರ ಭಾವಿಸಿದ್ದಾರೆ.
