ಸಬ್ಸಿಡಿ ಕೈಬಿಡುವ ಯೋಜನೆಯನ್ನು ರೈಲ್ವೆ ಇಲಾಖೆ ಹಂತಹಂತವಾಗಿ ಜಾರಿಗೊಳಿಸುವ ಸಾಧ್ಯತೆ ಇದೆ. ಮೊದಲಿಗೆ ಲಕ್ಷುರಿ ಟ್ರೈನ್'ಗಳೆನಿಸಿದ ರಾಜಧಾನಿ, ಶತಾಬ್ದಿಯಂತ ರೈಲುಗಳಲ್ಲಿ ಈ ಯೋಜನೆ ಜಾರಿಯಾಗಬಹುದು. ಬಳಿಕ ಅದು ಸಬ್'ಅರ್ಬನ್ ರೈಲುಗಳ ಮಟ್ಟಕ್ಕೂ ತಲುಪಬಹುದು ಎನ್ನಲಾಗಿದೆ.

ನವದೆಹಲಿ(ಜುಲೈ 06): ಅಡುಗೆ ಅನಿಲದಲ್ಲಿ ಸಬ್ಸಿಡಿ ಕೈಬಿಡುವಂತೆ ಸಾರ್ವಜನಿಕರನ್ನು ಕೋರಿ ಮಾಡಲಾದ "ಗಿವಿಟ್ ಅಪ್" ಅಭಿಯಾನದ ಹಾದಿಯಲ್ಲಿ ರೈಲ್ವೆ ಇಲಾಖೆಯೂ ನಡೆಯಲು ನಿರ್ಧರಿಸಿದೆ. ರೈಲ್ವೆ ಟಿಕೆಟ್ ದರದಲ್ಲಿ ಸರಕಾರ ನೀಡುವ ಸಬ್ಸಿಡಿಯನ್ನು ಕೈಬಿಡುವ ಅವಕಾಶವನ್ನು ಸಾರ್ವಜನಿಕರಿಗೆ ನೀಡಲು ರೈಲ್ವೆ ಇಲಾಖೆ ಯೋಜಿಸಿದೆ. ಮುಂದಿನ ತಿಂಗಳು ಈ ಅಭಿಯಾನ ಆರಂಭವಾಗುತ್ತದೆ.

ಸಬ್ಸಿಡಿಯಿಂದ ರೈಲ್ವೆ ಇಲಾಖೆ ಪ್ರತೀ ವರ್ಷ 30 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ಭಾರತೀಯ ರೈಲ್ವೆ ಟಿಕೆಟ್'ಗಳಲ್ಲಿ ಪ್ರಯಾಣಿಕರಿಗೆ ಶೇ.43ರಷ್ಟು ವಿನಾಯಿತಿ ಇದೆ. ಅಂದರೆ ಪ್ರಯಾಣಿಕರು 57% ಹಣವನ್ನು ಮಾತ್ರ ಪಾವತಿಸುತ್ತಿದ್ದಾರೆ. ಉಳಿದ ಹಣವನ್ನು ಇಲಾಖೆಯೇ ಭರಿಸುತ್ತದೆ. ಎಲ್'ಪಿಜಿ ಸಬ್ಸಿಡಿ ವಿಚಾರದಲ್ಲಿ "ಗಿವ್ ಇಟ್ ಅಪ್" ಅಭಿಯಾನ ತಕ್ಕಮಟ್ಟಿಗೆ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಅದೇ ಪ್ರೇರಣೆಯಲ್ಲಿ ರೈಲ್ವೆ ಇಲಾಖೆ ಈ ಹೊಸ ಯೋಜನೆ ರೂಪಿಸಿದೆ. ಅದರಂತೆ ರೈಲ್ವೆ ಪ್ರಯಾಣಿಕರಿಗೆ ಸದ್ಯಕ್ಕೆ 50% ಮತ್ತು 100% ಸಬ್ಸಿಡಿ ಬಿಟ್ಟುಕೊಡುವ ಎರಡು ಐಚ್ಛಿಕಗಳನ್ನು ಮೊದಲಿಗೆ ನೀಡಲು ನಿರ್ಧರಿಸಲಾಗಿದೆ.

ಆನ್'ಲೈನ್'ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿದವರಿಗೆ ಸಿಗುವ ಟಿಕೆಟ್ ಪ್ರಿಂಟ್'ನಲ್ಲಿ "ಪ್ರಯಾಣದ 57% ದರವನ್ನು ಮಾತ್ರ ಭಾರತೀಯ ರೈಲ್ವೆ ಪಡೆಯುತ್ತದೆ" ಎಂಬರ್ಥದ ಸಂದೇಶವಿರುವದನ್ನು ನೋಡಬಹುದು.

ಸಬ್'ಅರ್ಬನ್ ರೈಲುಗಳಲ್ಲಿ ಟಿಕೆಟ್ ದರಗಳಿಗೆ ಸಿಕ್ಕಾಪಟ್ಟೆ ಸಬ್ಸಿಡಿ ಇದೆ. ಪ್ರಯಾಣಿಕರು ಶೇ. 36ರಷ್ಟು ಮಾತ್ರ ಹಣ ಪಾವತಿ ಮಾಡುತ್ತಾರೆ. ಉಳಿದದ್ದನ್ನ ಇಲಾಖೆಯೇ ಭರಿಸುತ್ತದೆ. ಸಬ್ಸಿಡಿ ಕೈಬಿಡುವ ಯೋಜನೆಯನ್ನು ರೈಲ್ವೆ ಇಲಾಖೆ ಹಂತಹಂತವಾಗಿ ಜಾರಿಗೊಳಿಸುವ ಸಾಧ್ಯತೆ ಇದೆ. ಮೊದಲಿಗೆ ಲಕ್ಷುರಿ ಟ್ರೈನ್'ಗಳೆನಿಸಿದ ರಾಜಧಾನಿ, ಶತಾಬ್ದಿಯಂತ ರೈಲುಗಳಲ್ಲಿ ಈ ಯೋಜನೆ ಜಾರಿಯಾಗಬಹುದು. ಬಳಿಕ ಅದು ಸಬ್'ಅರ್ಬನ್ ರೈಲುಗಳ ಮಟ್ಟಕ್ಕೂ ತಲುಪಬಹುದು ಎನ್ನಲಾಗಿದೆ.