ನೋಟು ಮುದ್ರಣದಿಂದ ತೊಡಗಿ ಅದನ್ನು ವಿತರಣ ಕೇಂದ್ರಗಳಿಗೆ ತಲುಪಿಸುವ ತನಕದ 21 ದಿನಗಳ ಸಾರಿಗೆ ಅವಧಿ ಇದೀಗ ಕೇವಲ ಆರು ದಿನಗಳಿಗೆ ಇಳಿದಿದೆ. ಮುಂದಿನ ದಿನಗಳಲ್ಲಿ ಈ ಅವಧಿಯನ್ನು ಇನ್ನೂ ಕಡಿತಗೊಳಿಸಲು ಸರಕಾರ ಉದ್ದೇಶಿಸಿದೆ
ನವದೆಹಲಿ (ನ.21): 500 ರೂ. ಮತ್ತು 1,000 ರೂ. ಕರೆನ್ಸಿ ನೋಟುಗಳ ನಿಷೇಧದಿಂದ ದೇಶಾದ್ಯಂತ ಉಂಟಾಗಿರುವ ನಗದು ಹಣದ ತೀವ್ರ ಕೊರತೆಯನ್ನು ಸಮರೋಪಾದಿಯಲ್ಲಿ ನಿಭಾಯಿಸುವ ನಿಟ್ಟಿನಲ್ಲಿ ಸರಕಾರ ಇದೀಗ ಹೆಲಿಕಾಪ್ಟರ್ ಹಾಗೂ ವಾಯು ಪಡೆ ವಿಮಾನಗಳನ್ನು ಬಳಸಿಕೊಳ್ಳಲು ಮುಂದಾಗಿದೆ.
ಇದರಿಂದಾಗಿ ನೋಟು ಮುದ್ರಣದಿಂದ ತೊಡಗಿ ಅದನ್ನು ವಿತರಣ ಕೇಂದ್ರಗಳಿಗೆ ತಲುಪಿಸುವ ತನಕದ 21 ದಿನಗಳ ಸಾರಿಗೆ ಅವಧಿ ಇದೀಗ ಕೇವಲ ಆರು ದಿನಗಳಿಗೆ ಇಳಿದಿದೆ. ಮುಂದಿನ ದಿನಗಳಲ್ಲಿ ಈ ಅವಧಿಯನ್ನು ಇನ್ನೂ ಕಡಿತಗೊಳಿಸಲು ಸರಕಾರ ಉದ್ದೇಶಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ದೇಶದ ನಗರ ಪ್ರದೇಶಗಳಲ್ಲೀಗ ಹೊಸ ನೋಟುಗಳ ಪರ್ಯಾಪ್ತ ಲಭ್ಯತೆಯು ಗಮನಾರ್ಹವಾಗಿ ಸುಧಾರಿಸಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಈಗಲೂ ನಗದು ಕೊರತೆ ಹಾಗೆಯೇ ಉಳಿದಿದೆ. ಅಂತೆಯೇ ಸರಕಾರ ಈಗ ಗ್ರಾಮೀಣ ಭಾಗಗಳಿಗೆ ಹೊಸ ನೋಟುಗಳ ಪೂರೈಕೆಗೆ ಆದ್ಯತೆ ನೀಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲೆಡೆ ಹೊಸ ನೋಟುಗಳ ಪರ್ಯಾಪ್ತ ಲಭ್ಯತೆಯು ಕಂಡುಬರಲಿದೆ; ನಗದು ಹಣ ಹಾಹಾಕಾರ ನಿವಾರಣೆಗೊಳ್ಳಲಿದೆ ಎಂದು ಸರಕಾರ ಹೇಳಿದೆ.
