ಗೋವಾದ ಬೈನಾದಲ್ಲಿ ನಿರಾಶ್ರಿತರಾದ ಕನ್ನಡಿಗರಿಗೆ ಕರ್ನಾಟಕ ಸರ್ಕಾರವೇ ಪುನರ್ವಸತಿ ಕಲ್ಪಿಸಲಿದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ತಿಳಿಸಿದ್ದಾರೆ.

ವಾಸ್ಕೋ (ಗೋವಾ): ಗೋವಾದ ಬೈನಾದಲ್ಲಿ ನಿರಾಶ್ರಿತರಾದ ಕನ್ನಡಿಗರಿಗೆ ಕರ್ನಾಟಕ ಸರ್ಕಾರವೇ ಪುನರ್ವಸತಿ ಕಲ್ಪಿಸಲಿದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ತಿಳಿಸಿದ್ದಾರೆ.

ಬೈನಾದಲ್ಲಿ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿರುವ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ನಿರಾಶ್ರಿತರ ಅಳಲನ್ನು ಆಲಿಸಿ, ಪುನರ್ವಸತಿ ಕಲ್ಪಿಸುವ ಭರವಸೆ ನೀಡಿದರು. ಗೋವಾ ಸರ್ಕಾರ ಕನ್ನಡಿಗರ ಮನೆಗಳನ್ನು ಆಗಾಗ ಕೆಡವಿ ಹಾಕುತ್ತಿದೆ. ಇದರಿಂದ ಬಡವರು ನಿರಾಶ್ರಿತರಾಗುತ್ತಿದ್ದಾರೆ. ಗೋವಾ ಸರ್ಕಾರ ಘೋರ ಅನ್ಯಾಯ ಮಾಡುತ್ತಿದೆ. ಬೈನಾ ಕನ್ನಡಿಗರ ಪರಿಸ್ಥಿತಿ ತಿಳಿಯಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನನ್ನನ್ನು ಕಳುಹಿಸಿದ್ದು, ಗೋವಾ ಸರ್ಕಾರಕ್ಕೂ ಪತ್ರ ಬರೆದು ಕನ್ನಡಿಗರಿಗೆ ನ್ಯಾಯ ದೊರಕಿಸಲು ವಿನಂತಿಸಿದ್ದಾರೆ. ನಾನೂ ಸಿಎಂಗೆ ಇಲ್ಲಿನ ಪರಿಸ್ಥಿತಿ ವಿವರಿಸಿ ಅಗತ್ಯ ವ್ಯವಸ್ಥೆ ಮಾಡುತ್ತೇನೆ ಎಂದರು.

ಈ ವೇಳೆ ನಿರಾಶ್ರಿತರು ಚಿಂಚನಸೂರ್ ಅವರೆದುರು ಕಣ್ಣೀರಿಟ್ಟು, ‘ನಮಗೆ ಹಣ, ಊಟ ಬ್ಯಾಡ್ರಿ, ತಲೆಮ್ಯಾಗೊಂದು ಸೂರು ಕೊಡ್ರಿ’ ಎಂದು ಅಳಲು ತೋಡಿಕೊಂಡರು.