ಇ- ತಂಬಾಕು ನಿಷೇಧಕ್ಕೆ ಕೇಂದ್ರದಿಂದ ಸುಗ್ರಿವಾಜ್ಞೆ?
ಇ- ತಂಬಾಕು ನಿಷೇಧಕ್ಕೆ ಸುಗ್ರಿವಾಜ್ಞೆ?| ದೆಹಲಿ ಹೈ ಕೋರ್ಟ್, ತನ್ನ ನಿರ್ಧಾರ ವಾಪಸ್ ಪಡೆಯದಿದ್ದರೆ ಸುಗ್ರಿವಾಜ್ಞೆ ಮೂಲಕ ನಿಷೇಧಕ್ಕೆ ಚಿಂತನೆ
ದೆಹಲಿ[ಆ.19]: ಇ-ಸಿಗರೇಟ್ ಸಹಿತ ವಿದ್ಯುನ್ಮಾನ ತಂಬಾಕು ಪದಾರ್ಥಗಳನ್ನು ನಿಷೇಧ ಮಾಡುವ ಪ್ರಸ್ತಾಪವನ್ನು ತಡೆಹಿಡಿದಿರುವ ದೆಹಲಿ ಹೈ ಕೋರ್ಟ್, ತನ್ನ ನಿರ್ಧಾರ ವಾಪಸ್ ಪಡೆಯದಿದ್ದರೆ ಸುಗ್ರಿವಾಜ್ಞೆ ಮೂಲಕ ಅವುಗಳನ್ನು ನಿಷೇಧ ಮಾಡುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಅವಧಿಯ ನೂರು ದಿನಗಳ ಯೋಜನೆಯ ಅಂಗವಾಗಿ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಗಹನವಾದ ಚಿಂತನೆ ನಡೆಸಿದ್ದು, ಇ- ಸಿಗರೇಟ್, ಇ-ನಿಕೋಟಿನ್ ರುಚಿಯ ಹುಕ್ಕಾ ಮುಂತಾದ ವಿದ್ಯುನ್ಮಾನ ತಂಬಾಕುಗಳ ಉತ್ಪಾದನೆ, ಮಾರಾಟ, ವಿತರಣೆ ಹಾಗೂ ಆಮದು ನಿರ್ಬಂಧಿಸುವ ಸಾಧ್ಯತೆ ಇದೆ.
ಈ ಬಗ್ಗೆ ಈಗಾಗಲೇ ಕಾನೂನು ಸಲಹೆ ಕೂಡ ಕೇಂದ್ರ ಆರೋಗ್ಯ ಇಲಾಖೆ ಪಡೆದಿದ್ದು, ಸುಗ್ರಿವಾಜ್ಞೆ ಮೂಲಕ ಕಾನೂನು ತಂದು ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಯೋಚನೆಯಲ್ಲಿದೆ ಎನ್ನಲಾಗಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ಔಷಧಿ ಗುಣಮಟ್ಟನಿಯಂತ್ರಣ ಸಂಸ್ಥೆ ಎಲ್ಲಾ ರಾಜ್ಯಗಳ ಔಷಧಿ ವ್ಯಾಪಾರಿಗಳಿಗೆ ಪತ್ರ ಬರೆದಿದ್ದು, ಇಂಥ ಸಾಮಾಗ್ರಿಗಳ ಉತ್ಪಾದನೆ , ಮಾರಾಟ, ವಿತರಣೆ, ಆಮದು ಹಾಗೂ ಜಾಹಿರಾತು ಸಲ್ಲದು ಎಂದು ಹೇಳಿದೆ.
2018 ಆಗಸ್ಟ್ ತಿಂಗಳಿನಲ್ಲಿ ವಿದ್ಯುನ್ಮಾನ ತಂಬಾಕುಗಳು ಮಾದಕ ವಸ್ತುಗಳಾಗಿರುವುದರಿಂದ ಅವುಗಳನ್ನು ನಿಷೇಧಿಸಬೇಕು ಎಂದ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ಹೊರಡಿಸಿತ್ತು. ಆದರೆ ಕೇಂದ್ರದ ಈ ನಿರ್ಧಾರಕ್ಕೆ ದೆಹಲಿ ಹೈ ಕೋರ್ಟ್‌ನ ಏಕ ಸದಸ್ಯ ಪೀಠ ಇದೇ ಮಾಚ್‌ರ್ ತಿಂಗಳಿನಲ್ಲಿ ಮಧ್ಯಂತರ ತಡೆ ನೀಡಿತ್ತು. ಇದಕ್ಕೆ ವಿರುದ್ದವಾಗಿ ಕೇಂದ್ರ ಸರ್ಕಾರ ಕೂಡ ಅಫಿಡವಿಟ್ ಅಲ್ಲಿಸಿದ್ದು, ಆ. 22 ರಂದು ವಿಚಾರಣೆ ನಡೆಯಲಿದೆ.
ಬ್ರೆಝಿಲ್, ನಾರ್ವೆ ಹಾಗೂ ಸಿಂಗಾಪುರ್ ಸಹಿತ 25 ಕ್ಕೂ ಹೆಚ್ಚಿನ ದೇಶಗಳಲ್ಲಿ ಇ- ತಂಬಾಕುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, 17 ದೇಶಗಳಲ್ಲಿ ಈ ಬಗ್ಗೆ ನಿರ್ಧಾರ ಅಂತಿಮ ಹಂತದಲ್ಲಿವೆ. ಪಂಜಾಬ್, ಕರ್ನಾಟಕ, ಕೇರಳ, ಬಿಹಾರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಜಾರ್ಖಂಡ್, ರಾಜಸ್ಥಾನ ಮತ್ತು ಮಿಜೋರಾಂ ನಲ್ಲಿ ಈಗಾಗಲೇ ಇಂಥ ವಸ್ತುಗಳಿಗೆ ನಿಷೇಶ ಹೇರಲಾಗಿದೆ.