ಶೀಘ್ರದಲ್ಲೇ ಕಾಲೇಜುಗಳಿಗೆ 5000 ಬೋಧಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ. ಟಿ ದೇವೇಗೌಡ ಹೇಳಿದ್ದಾರೆ
ಬೆಂಗಳೂರು : ರಾಜ್ಯದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಐದು ಸಾವಿರ ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ವಿವಿಧ ಕಾಲೇಜುಗಳಲ್ಲಿ ಖಾಲಿ ಇರುವ 395 ಪ್ರಾಂಶುಪಾಲರ ಹುದ್ದೆ ಸೇರಿದಂತೆ ಐದು ಸಾವಿರ ಬೋಧಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಹಣಕಾಸು ಇಲಾಖೆ ಮೌಖಿಕವಾಗಿ ಒಪ್ಪಿಗೆ ನೀಡಿದ್ದು, ಆರು ತಿಂಗಳಲ್ಲಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 102 ಪದವಿ ಕಾಲೇಜುಗಳಿಗೆ ಕಟ್ಟಡಗಳೇ ಇಲ್ಲ. 3,800 ಮಂದಿ ಬೋಧಕ ಸಿಬ್ಬಂದಿಯ ಕೊರತೆ ಇದೆ. 800 ಕಾಯಂ ಹುದ್ದೆ ಖಾಲಿ ಇದ್ದು, 395 ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರು ಇಲ್ಲ. ಇಂತಹ ಕಡೆಗಳಲ್ಲಿ ಉಸ್ತುವಾರಿ ಹೊಣೆ ಹೊರೆಸಿ ನಿರ್ವಹಣೆ ಮಾಡಲಾಗುತ್ತಿದೆ. ಕಳೆದ ಬಾರಿ ನೇಮಕವಾಗಿದ್ದ 10,500 ಮಂದಿ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರೆಸಿ ನಿರ್ಣಯ ಕೈಗೊಂಡಿದ್ದೇವೆ. ಆದಾಗ್ಯೂ ಬೋಧಕ ಸಿಬ್ಬಂದಿ ಕಾಯಂ ನೇಮಕಾತಿಗೆ ಇಲಾಖೆ ಮುಂದಾಗಿದೆ ಎಂದರು.
ಐದು ಸಾವಿರ ಬೋಧಕ ಸಿಬ್ಬಂದಿ ನೇಮಕಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್ ಮೌಖಿಕ ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಭರವಸೆ ನೀಡಿದರು.
ಮೂಲಸೌಕರ್ಯಕ್ಕೆ ಆದ್ಯತೆ: ರಾಜ್ಯದ 102 ಪದವಿ ಕಾಲೇ ಜುಗಳಿಗೆ ಕಟ್ಟಡಗಳಿಲ್ಲ. ಜತೆಗೆ ಬಹುತೇಕ ಕಡೆ ಮೂಲ ಸೌಕರ್ಯ ಸಮಸ್ಯೆ ಕಾಣಿಸುತ್ತಿದೆ. ಕಾಲೇಜು ಕಟ್ಟಡಗಳ ನಿರ್ಮಾಣ ಮಾಡಲು 250 ಕೋಟಿ ರು. ಅನುದಾನ ಬಜೆಟ್ ನಲ್ಲಿ ಒದಗಿಸಲಾಗಿದೆ. 750 ಕೋಟಿ ರು.ವರೆಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಳ್ಳಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.
ಜತೆಗೆ ನಬಾರ್ಡ್ ಹಾಗೂ ವಿಶ್ವ ಬ್ಯಾಂಕ್ ನೆರವು ಪಡೆಯಲು ಸಹ ಉದ್ದೇಶಿಸಿದ್ದೇವೆ. ನಬಾರ್ಡ್‌ನಿಂದ 800 ಕೋಟಿ ರು. ಅನುದಾನದಲ್ಲಿ 100 ಕೋಟಿ ಮಾತ್ರ ಈ ವರ್ಷಕ್ಕೆ ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿ ಬಂದಿದೆ. ಕನಿಷ್ಠ 300 ಕೋಟಿ ರು. ಬಿಡುಗಡೆಗೆ ಮನವಿ ಮಾಡಿದ್ದೇವೆ. ಜತೆಗೆ ವಿಶ್ವಬ್ಯಾಂಕ್‌ನಿಂದ ವಿಶೇಷ ಅನುದಾನ ಪಡೆಯಲು ಪ್ರಸ್ತಾವನೆ ಸಿದ್ದಪಡಿಸುತ್ತಿದ್ದೇವೆ. ಈ ಎಲ್ಲಾ ಅನುದಾನದಿಂದ ಕಾಲೇಜುಗಳ ಕಟ್ಟಡ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುವುದು ಎಂದರು.
1 ತಿಂಗಳಲ್ಲಿ ವಿ.ವಿ.ಗಳ ಕುಲಪತಿ ನೇಮಕ: ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳ ಕುಲಪತಿಗಳ ಹುದ್ದೆ ಹಲವು ವರ್ಷಗಳಿಂದ ಖಾಲಿ ಇದೆ. ಶೋಧನಾ ಸಮಿತಿ ವರದಿ ಆಧಾರದ ಮೇಲೆ ಸೂಕ್ತ ಹೆಸರುಗಳನ್ನು ಪಡೆದು ಒಂದು ತಿಂಗಳಲ್ಲಿ ಕುಲಪತಿಗಳ ನೇಮಕ ಮಾಡಲಾಗುವುದು ಎಂದು ದೇವೇಗೌಡ ಹೇಳಿದರು.
ಈ ಬಗ್ಗೆ ಆಗಸ್ಟ್ 1 ಹಾಗೂ 2ರಂದು ಉನ್ನತ ಶಿಕ್ಷಣ ಪರಿಷತ್ ಸಭೆ ನಡೆಸಲಾಗುವುದು. ಆ.3 ರಂದು ಮುಂದು ವರಿದ ಕಾಮಗಾರಿಗಳ ಪರಿಶೀಲನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
