ನವದೆಹಲಿ[ಜೂ.22]: ತಲಾಖ್‌ ಎಂದು ಮೂರು ಬಾರಿ ಹೇಳಿ ಹಠಾತ್‌ ವಿಚ್ಛೇದನ ನೀಡುವ ಮುಸಲ್ಮಾನರ ಪದ್ಧತಿ ‘ತಲಾಖ್‌ ಎ ಬಿದ್ದತ್‌’ (ತ್ರಿವಳಿ ತಲಾಖ್‌) ಅನ್ನು ಶಿಕ್ಷಾರ್ಹ ಅಪರಾಧಗೊಳಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಶುಕ್ರವಾರ ಪ್ರತಿಪಕ್ಷಗಳ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಮತ್ತೊಮ್ಮೆ ಮಂಡನೆ ಮಾಡಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪುನರಾಯ್ಕೆಯಾದ ಬಳಿಕ ಮಂಡನೆಯಾದ ಮೊದಲ ವಿಧೇಯಕ ಇದಾಗಿದೆ. ‘ಮುಸಲ್ಮಾನ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಮಸೂದೆ 2019’ ಎಂಬ ಈ ವಿಧೇಯಕವನ್ನು ಮತಗಳ ವಿಭಜನೆ ಬಳಿಕ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಅವರು ಮಂಡನೆ ಮಾಡಿದರು. ಮಸೂದೆ ಮಂಡನೆ ಪರ 186 ಹಾಗೂ ವಿರೋಧವಾಗಿ 86 ಮತಗಳು ಚಲಾವಣೆಯಾದವು.

ಈ ವೇಳೆ ಮಾತನಾಡಿ, ತ್ರಿವಳಿ ತಲಾಖ್‌ ಅನ್ನು ಸುಪ್ರೀಂಕೋರ್ಟ್‌ ನಿಷೇಧಿಸಿದ ತರುವಾಯ 200 ಪ್ರಕರಣಗಳು ವರದಿಯಾಗಿವೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಏನು ಮಾಡಬೇಕು? ತೀರ್ಪನ್ನು ಗೋಡೆಗೆ ನೇತು ಹಾಕಬೇಕೇನು? ಲಿಂಗ ಸಮಾನತೆ ಹಾಗೂ ಮಹಿಳೆಯರ ನ್ಯಾಯಕ್ಕಾಗಿ ಈ ಮಸೂದೆ ಅತ್ಯಗತ್ಯವಾಗಿದೆ. ಇದರಲ್ಲಿ ಧರ್ಮದ ಪ್ರಶ್ನೆಯೇ ಇಲ್ಲ. ತ್ರಿವಳಿ ತಲಾಖ್‌ನಲ್ಲಿ ಮಹಿಳೆಯರ ಗೌರವದ ಪ್ರಶ್ನೆ ಅಡಗಿದೆ. ಅದನ್ನು ರಕ್ಷಿಸಲು ನಾವು ಬುದ್ಧವಾಗಿದ್ದೇವೆ ಎಂದು ಹೇಳಿದರು.

ಮಸೂದೆ ಮಂಡನೆಗೆ ಸ್ಪೀಕರ್‌ ಓಂ ಬಿರ್ಲಾ ಅವರು ಒಪ್ಪಿಗೆ ನೀಡುತ್ತಿದ್ದಂತೆ ಹಲವು ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸದಸ್ಯರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಸ್ಪೀಕರ್‌ ಅನುವು ಮಾಡಿಕೊಟ್ಟರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ಸಿನ ಸಂಸದ ಶಶಿ ತರೂರ್‌, ತ್ರಿವಳಿ ತಲಾಖ್‌ಗೆ ನನ್ನ ವಿರೋಧವಿದೆ. ಸಿವಿಲ್‌ ಹಾಗೂ ಕ್ರಿಮಿನಲ್‌ ಕಾನೂನುಗಳನ್ನು ಒಟ್ಟಿಗೆ ಸೇರಿಸುವ ಈ ಕಾಯ್ದೆ ಬಗ್ಗೆಯೂ ನನ್ನ ವಿರೋಧ ಇದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಶಾಸನ ರೂಪಿಸಲಾಗಿದೆ. ಪತ್ನಿಯರನ್ನು ತ್ಯಜಿಸುವವರಿಗೂ ಅನ್ವಯವಾಗುವ ಏಕರೂಪದ ಕಾನೂನು ತರಬೇಕಿದೆ ಎಂದು ಆಗ್ರಹಿಸಿದರು.

ಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ಮಾತನಾಡಿ, ಬಿಜೆಪಿಗೆ ಮುಸ್ಲಿಂ ಮಹಿಳೆಯರ ಮೇಲೆ ತುಂಬಾ ಬಾಂಧವ್ಯವಿದೆ. ಆದರೆ ಹಿಂದು ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಲು ಹೊರಟರೆ ವಿರೋಧ ವ್ಯಕ್ತಪಡಿಸುತ್ತದೆ ಎಂದು ಚಾಟಿ ಬೀಸಿದರು. ತ್ರಿವಳಿ ತಲಾಖ್‌ ಮಸೂದೆಯಡಿ ತಪ್ಪಿತಸ್ಥ ಮುಸ್ಲಿಮರಿಗೆ 3 ವರ್ಷ ಶಿಕ್ಷೆ ವಿಧಿಸುವ ಅವಕಾಶವಿದೆ. ಆದರೆ ಇತರೆ ಧರ್ಮದಲ್ಲಿ ಕೇವಲ ಒಂದು ವರ್ಷ ಜೈಲು ಶಿಕ್ಷೆ ಇದೆ ಎಂದು ಹೇಳಿದರು.

16ನೇ ಲೋಕಸಭೆಯಲ್ಲಿ ತ್ರಿವಳಿ ತಲಾಖ್‌ ಅಂಗೀಕಾರವಾಗಿತ್ತು. ರಾಜ್ಯಸಭೆಯ ಅಂಗೀಕಾರಕ್ಕೆ ಬಾಕಿ ಉಳಿದಿತ್ತು. ಅಷ್ಟರಲ್ಲಿ ಲೋಕಸಭೆ ವಿಸರ್ಜನೆಯಾಗಿತ್ತು. ಹೀಗಾಗಿ ಹೊಸದಾಗಿ ಮಸೂದೆಯನ್ನು ಮಂಡನೆ ಮಾಡಲಾಗಿದೆ. ಈ ನಡುವೆ, ತ್ರಿವಳಿ ತಲಾಖ್‌ ಕಾನೂನನ್ನು ಸುಗ್ರೀವಾಜ್ಞೆ ರೂಪದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು.

ತ್ರಿವಳಿ ತಲಾಖ್‌ ಎಂಬುದು ಕಾನೂನು ಬಾಹಿರ, ಅಸಿಂಧು ಎಂದು ಸಾರುವ ಈ ಮಸೂದೆ, ತಪ್ಪಿತಸ್ಥರ ಪತಿರಾಯರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವ ಹೊಂದಿದೆ.