* ಪ್ಲಾಸ್ಟಿಕ್ ನೋಟುಗಳು ಸಾಮಾನ್ಯವಾಗಿ 5 ವರ್ಷ ಬಾಳಿಕೆ ಬರುತ್ತವೆ* ಇವುಗಳನ್ನು ನಕಲಿ ಮಾಡುವುದು ಕಷ್ಟ* ಪೇಪರ್ ನೋಟುಗಳಿಗಿಂತ ಇವು ಹೆಚ್ಚು ಶುಭ್ರವಾಗಿರುತ್ತವೆ
ನವದೆಹಲಿ(ಡಿ. 09): ನಕಲಿ ನೋಟಿನ ಹಾವಳಿ ತಡೆಗಟ್ಟುವ ಉದ್ದೇಶದಿಂದ ಪ್ಲಾಸ್ಟಿಕ್ ನೋಟನ್ನು ಮುದ್ರಿಸಲು ನಿರ್ಧರಿಸಿರುವುದಾಗಿ ಕೇಂದ್ರ ಸರಕಾರವು ಸಂಸತ್’ಗೆ ಮಾಹಿತಿ ನೀಡಿದೆ. ಪ್ಲಾಸ್ಟಿಕ್ ನೋಟ್ ಮುದ್ರಣಕ್ಕೆ ಬೇಕಾದ ಸಾಮಗ್ರಿಗಳ ಖರೀದಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಶುಕ್ರವಾರ ತಿಳಿಸಿದರು. ಇದಾದಲ್ಲಿ ಪ್ಲಾಸ್ಟಿಕ್ ಕರೆನ್ಸಿ ಹೊಂದಿರುವ ಕೆಲವೇ ರಾಷ್ಟ್ರಗಳ ಗುಂಪಿಗೆ ಭಾರತವೂ ಸೇರುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ಪ್ಲಾಸ್ಟಿಕ್ ಹಣ ಮುದ್ರಿಸುವ ಐಡಿಯಾ ಬಹಳ ಕಾಲದಿಂದಲೂ ಇಟ್ಟುಕೊಂಡಿದೆ. 2014ರ ಫೆಬ್ರವರಿಯಲ್ಲಿ 10 ರೂ ಮುಖಬೆಲೆಯ 100 ಕೋಟಿ ಪ್ಲಾಸ್ಟಿಕ್ ನೋಟನ್ನು ಮುದ್ರಿಸುವುದಾಗಿ ಸರಕಾರವು ಹೇಳಿತ್ತು. ಮೈಸೂರು, ಕೊಚ್ಚಿ, ಜೈಪುರ, ಶಿಮ್ಲಾ ಮತ್ತು ಭುವನೇಶ್ವರ್ ಈ ಐದು ನಗರಗಳಲ್ಲಿ ಪ್ರಾಯೋಗಿಕವಾಗಿ ಈ ಪ್ಲಾಸ್ಟಿಕ್ ಹಣವನ್ನು ಬಿಡುವುದಾಗಿ ಸರಕಾರ ತಿಳಿಸಿತ್ತು. ಆದರೆ, ಆ ಯೋಜನೆ ಇನ್ನೂ ಕೈಗೂಡಿರಲಿಲ್ಲ. ಇದೀಗ, ಸರಕಾರವು ಮತ್ತೊಮ್ಮೆ ಆ ಪ್ರಸ್ತಾವಕ್ಕೆ ಜೀವ ನೀಡಿದೆ.
ಪ್ಲಾಸ್ಟಿಕ್ ನೋಟಿಂದ ಉಪಯೋಗವೇನು?
* ಪ್ಲಾಸ್ಟಿಕ್ ನೋಟುಗಳು ಸಾಮಾನ್ಯವಾಗಿ 5 ವರ್ಷ ಬಾಳಿಕೆ ಬರುತ್ತವೆ
* ಇವುಗಳನ್ನು ನಕಲಿ ಮಾಡುವುದು ಕಷ್ಟ
* ಪೇಪರ್ ನೋಟುಗಳಿಗಿಂತ ಇವು ಹೆಚ್ಚು ಶುಭ್ರವಾಗಿರುತ್ತವೆ
