ನವದೆಹಲಿ[ಡಿ.05]: ಯೋಧರ ‘ಏಕಶ್ರೇಣಿ-ಏಕಪಿಂಚಣಿ’ ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ಹೇಳುವ ಮೋದಿ ಸರ್ಕಾರವು ಯೋಧರ ಇನ್ನೊಂದು ಬೇಡಿಕೆಯಾಗಿದ್ದ ‘ಸೇನಾ ಸೇವಾ ವೇತನ’ದ (ಎಂಎಸ್‌ಪಿ) ಹೆಚ್ಚಳ ಪ್ರಸ್ತಾಪವನ್ನು ತಿರಸ್ಕರಿಸಿದೆ. ವಿತ್ತ ಸಚಿವಾಲಯದ ಈ ನಿರ್ಧಾರ ಸೇನೆಯ ಮೂರೂ ಅಂಗಗಳ ಆಕ್ರೋಶಕ್ಕೆ ತುತ್ತಾಗಿದ್ದು, ನಿರ್ಣಯವನ್ನು ಮರುಪರಿಶೀಲಿಸುವಂತೆ ಆಗ್ರಹಿಸಲು ಅವು ನಿರ್ಧರಿಸಿವೆ.

ಸುಮಾರು 1.12 ಲಕ್ಷ ಸೇನಾ ಸಿಬ್ಬಂದಿ (ಸೇನೆ/ವಾಯುಪಡೆ/ನೌಕಾಪಡೆಯ ಅಧಿಕಾರಿಗಳು ಹಾಗೂ ಜವಾನರು) ಈ ಸವಲತ್ತಿಗೆ ಅರ್ಹರಾಗಿದ್ದು, ಅವರು ಹೆಚ್ಚಿನ ಎಂಎಸ್‌ಪಿಗೆ ಬೇಡಿಕೆ ಇಟ್ಟಿದ್ದರು.

ಏನಿದು ಎಂಎಸ್‌ಪಿ?:

ಯುದ್ಧವಲಯದಲ್ಲಿ ಹಾಗೂ ಕಷ್ಟಕರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ‘ಸೇನಾ ಸೇವಾ ವೇತನ’ ಹೆಸರಿನಲ್ಲಿ ಗೌರವ ವೇತನವನ್ನು ಸರ್ಕಾರ ನೀಡುತ್ತದೆ. ಇದೀಗ ಮಾಸಿಕ 5,500 ರು. ಇದ್ದು, 10 ಸಾವಿರ ರು.ಗೆ ಹೆಚ್ಚಿಸಲು ಕೋರಲಾಗಿತ್ತು. ಇದಕ್ಕೆ ಒಪ್ಪಿದರೆ ಸರ್ಕಾರಕ್ಕೆ ವಾರ್ಷಿಕ 610 ಕೋಟಿ ರು. ಹೆಚ್ಚುವರಿ ಹೊರೆಯಾಗುತ್ತಿತ್ತು.