ಡೆಬಿಟ್ ಕಾರ್ಡ್ ಕ್ರೆಡಿಟ್ ಅಥವಾ ಭೀಮ್ ಆ್ಯಪ್ ಪೇಟಿಎಂನಂಥ ಆ್ಯಪ್ ಬಳಸಿ ಹಣ ಪಾವತಿಸಿದರೆ ಜಿಎಸ್ಟಿಯಲ್ಲಿ ಶೇ.2ರಷ್ಟು ರಿಯಾಯ್ತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ನವದೆಹಲಿ( ನ.23): ಡೆಬಿಟ್ ಕಾರ್ಡ್ ಕ್ರೆಡಿಟ್ ಅಥವಾ ಭೀಮ್ ಆ್ಯಪ್ ಪೇಟಿಎಂನಂಥ ಆ್ಯಪ್ ಬಳಸಿ ಹಣ ಪಾವತಿಸಿದರೆ ಜಿಎಸ್ಟಿಯಲ್ಲಿ ಶೇ.2ರಷ್ಟು ರಿಯಾಯ್ತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ನಗದು ರಹಿತ ವಹಿವಾಟು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದ್ದು, ಮುಂದಿನ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ತೀರ್ಮಾನವಾಗುವ ಸಾಧ್ಯತೆ ಇದೆ.
ಒಂದು ವ್ಯವಹಾರಕ್ಕೆ ಗರಿಷ್ಠ 100 ರು.ಜಿಎಸ್ಟಿ ವಿನಾಯ್ತಿ ದೊರಕಿಸುವ ಇರಾದೆ ಇದೆ. ವಿನಾಯ್ತಿ ಗ್ರಾಹಕರಿಗೆ ಮಾತ್ರ ಲಭಿಸುತ್ತದೆ. ವ್ಯಾಪಾರಿಗಳಿಗೆ ಯಾವುದೇ ರಿಯಾಯ್ತಿ ಇಲ್ಲ. ಮುಂದಿನ ಸಭೆಯಲ್ಲಿ ಮತ್ತಷ್ಟು ಪ್ರಸ್ತಾಪಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಇದರಿಂದ ಉಂಟಾಗುವ ಹೊರೆಯನ್ನು ಭರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಈಗ 2 ಸಾವಿರ ರು.ವರೆಗಿನ ಮೊತ್ತದ ಖರೀದಿಗಳು ಹೆಚ್ಚಾಗಿ ಡಿಜಿಟಲ್ ವಿಧಾನದ ಮೂಲಕ ನಡೆಯುತ್ತಿವೆ. ರಿಯಾಯ್ತಿ ನೀಡಿದರೆ ನಗದು ರಹಿತ ವಹಿವಾಟು ಇನ್ನಷ್ಟು ಹೆಚ್ಚಲಿದೆ. ಮೋಸಗಾರಿಕೆ, ಕಾಳಧನ ನಿಯಂತ್ರಣಕ್ಕೆ ಬರಲಿವೆ ಎಂದು ಸರ್ಕಾರದ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.
ಜಿಎಸ್’ಟಿ ಬಳಿಕ ಆದಾಯ ತೆರಿಗೆಯಲ್ಲೂ ಬದಲು: ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮೂಲಕ ಇತ್ತೀಚೆಗಷ್ಟೇ ಜಿಎಸ್ಟಿ ವ್ಯವಸ್ಥೆ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ ಇದೀಗ ನೇರ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಗೆ ಮುಂದಾಗಿದೆ. ಈ ಮೂಲಕ ಮತ್ತೊಂದು ಐಸಿಹಾಸಿಕ ಹೆಜ್ಜೆಹಾಕಿದೆ. ಹಾಲಿ ದೇಶದಲ್ಲಿ ಜಾರಿಯಲ್ಲಿರುವುದು 1961ರಲ್ಲಿ ರೂಪಿಸಿದ ಆದಾಯ ತೆರಿಗೆ ಕಾಯ್ದೆ. ಅದನ್ನು ದೇಶದ ಸಮಕಾಲೀನ ಅಗತ್ಯಕ್ಕೆ ಅನುಗುಣವಾಗಿ ಬದಲಾಯಿಸಿ, ಹೊಸ ಸ್ಪರ್ಶದೊಂದಿಗೆ ನೂತನ ಕಾಯ್ದೆ ಜಾರಿಗೆ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ ಸದಸ್ಯ ಅರಬಿಂದ್ ಮೋದಿ ನೇತೃತ್ವದ 6 ಜನರ ಸಮಿತಿಯೊಂದನ್ನು ಸರ್ಕಾ ರಚಿಸಿದೆ. ಈ ಸಮಿತಿ ಮುಂದಿನ 6 ತಿಂಗಳ ಒಳಗೆ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ.
ಹೊಸ ಆದಾಯ ತೆರಿಗೆ ಕಾಯ್ದೆ ರಚನೆ ವೇಳೆ ದೇಶದ ಸಮಕಾಲೀನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳುವ ಜೊತೆಗೆ, ಅನ್ಯ ದೇಶಗಳಲ್ಲಿ ಜಾರಿಯಲ್ಲಿರುವ ಮಹತ್ವದ ಅಂಶಗಳನ್ನೂ ಸಮಿತಿ ಪರಿಗಣಿಸಲಿದೆ. ಹೆಚ್ಚಿನ ಜನರನ್ನು ತೆರಿಗೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಎಲ್ಲಾ ರೀತಿಯ ವಿನಾಯ್ತಿಗಳನ್ನು ತೆಗೆದು, ತೆರಿಗೆ ಪ್ರಮಾಣವನ್ನೇ ಕಡಿಮೆ ಮಾಡಬೇಕು ಎಂದು ಈ ಹಿಂದೆ, ಅಂದಿನ ಹಣಕಾಸು ಸಚಿವ ಚಿದಂಬರಂ ಪ್ರತಿಪಾದಿಸಿದ್ದರು.
