Asianet Suvarna News Asianet Suvarna News

ಆರ್‌ಟಿಐ ಕಾರ್ಯಕರ್ತರಿಗೆ ರಕ್ಷಣೆ : ಗೃಹ ಇಲಾಖೆ ಹೊಸದಾಗಿ ಆದೇಶ

ಆರ್‌ಟಿಐ ಕಾರ್ಯಕರ್ತರಿಗೆ ರಕ್ಷಣೆ ನೀಡುವ ಸಂಬಂಧ ಗೃಹ ಇಲಾಖೆ ಹೊಸದಾಗಿ ಆದೇಶ ಹೊರಡಿಸಿದ್ದು, ಕೆಲವು ನಿಬಂಧನೆಗಳನ್ನು ಹಾಕಿರುವ ಸರ್ಕಾರವು ಅರ್ಜಿಗಳ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಿದೆ.  ರಕ್ಷಣೆ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರ ಪೂರ್ವಾಪರ ಅವಲೋಕಿಸಿ ರಕ್ಷಣೆ ನೀಡುವುದು ಮತ್ತು ರಕ್ಷಣೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳುವ ಹೊಣೆಯನ್ನು ಸಮಿತಿಗೆ ನೀಡಿದೆ.

Govt Plan Protect to RTI Activist

ಬೆಂಗಳೂರು(ಸೆ.09): ಸರ್ಕಾರದ ಲೋಪದೋಷಗಳನ್ನು ರಹಸ್ಯವಾಗಿಡಲು ಪ್ರಯತ್ನಿಸುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಂಡವಾಳ ಬಯಲಿಗೆಳೆದು ಜೀವಕ್ಕೆ ಕಂಟಕ ತಂದುಕೊಳ್ಳುವ ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತರ ರಕ್ಷಣೆಗೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

ಆರ್‌ಟಿಐ ಕಾರ್ಯಕರ್ತರಿಗೆ ರಕ್ಷಣೆ ನೀಡುವ ಸಂಬಂಧ ಗೃಹ ಇಲಾಖೆ ಹೊಸದಾಗಿ ಆದೇಶ ಹೊರಡಿಸಿದ್ದು, ಕೆಲವು ನಿಬಂಧನೆಗಳನ್ನು ಹಾಕಿರುವ ಸರ್ಕಾರವು ಅರ್ಜಿಗಳ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಿದೆ.  ರಕ್ಷಣೆ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರ ಪೂರ್ವಾಪರ ಅವಲೋಕಿಸಿ ರಕ್ಷಣೆ ನೀಡುವುದು ಮತ್ತು ರಕ್ಷಣೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳುವ ಹೊಣೆಯನ್ನು ಸಮಿತಿಗೆ ನೀಡಿದೆ. ಈ ಮೂಲಕ ಜೀವಬೆದರಿಕೆ ಯಲ್ಲಿಯೇ ಹೋರಾಟ ನಡೆಸುತ್ತಿದ್ದ ಆರ್ ಟಿಐ ಕಾರ್ಯಕರ್ತರು ಸರ್ಕಾರದ ಅಧಿಕೃತ ಆದೇಶದಿಂದ ನಿಟ್ಟುಸಿರು ಬಿಡುವಂತಾಗಿದೆ. ಆರ್‌ಟಿಐ ಕಾಯ್ದೆ ಜಾರಿಯಾಗಿ 10 ವರ್ಷ ಕಳೆದರೂ ಕಾರ್ಯಕರ್ತರ ಜೀವಕ್ಕೆ ಯಾವುದೇ ರಕ್ಷಣೆ ಇರಲಿಲ್ಲ. ಸರ್ಕಾರದಲ್ಲಿನ ನ್ಯೂನತೆಗಳನ್ನು ಮಾಹಿತಿ ಹಕ್ಕಿನಡಿ ಬಹಿರಂಗ ಮಾಡುತ್ತಿದ್ದ ಆರ್‌ಟಿಐ ಕಾರ್ಯಕರ್ತರಿಗೆ ಅಧಿಕಾರಿ ಗಳು, ಜನಪ್ರತಿನಿಧಿಗಳು, ಪ್ರಾಬಲ್ಯಯುಳ್ಳ ವ್ಯಕ್ತಿಗಳು ಜೀವಬೆದರಿಕೆ ಹಾಕುತ್ತಿದ್ದರು. ಲೋಪಗಳನ್ನು ಬಯಲು ಮಾಡಿದ ಹಿನ್ನೆಲೆ ಯಲ್ಲಿ ರಾಜ್ಯದಲ್ಲಿ ನೂರಾರು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ.

ಅಲ್ಲದೇ ಹಲವು ಮಂದಿಯನ್ನು ಹತ್ಯೆ ಮಾಡಿರುವ ನಿದರ್ಶನಗಳಿವೆ. ಒಳ್ಳೆಯ ಉದ್ದೇಶ ಹಾಗೂ ಸಮಾಜದ ಹಿತಾಸಕ್ತಿ, ಸ್ವ ಹಿತಾಸಕ್ತಿಗಾಗಿ ಬಳಕೆ ಮಾಡಿಕೊಳ್ಳದಿರುವ ಮತ್ತು ಸೂಕ್ತವಾದ ಕಾರಣಗಳಿಟ್ಟು ಕೊಂಡು ಹೋರಾಟ ನಡೆಸುವ ಆರ್‌ಟಿಐ ಕಾರ್ಯಕರ್ತರಿಗೆ ರಕ್ಷಣೆ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏನೇನು ಕ್ರಮಗಳು?:

ಜೀವ ಬೆದರಿಕೆ ಇರುವ ಕಾರ್ಯಕರ್ತರು ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಡಿವೈಎಸ್‌ಪಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಸಲ್ಲಿಸುವ ಅರ್ಜಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬಹುದು. ರಕ್ಷಣೆ ನೀಡುವ ಸಂಬಂಧ ಒಂದು ವಾರದಲ್ಲಿ ತೀರ್ಮಾನ ಕೈಗೊಳ್ಳಬೇಕು. ನಿರ್ಧಾರ ಕೈಗೊಳ್ಳುವ ಕುರಿತು ಒಂದು ವಾರಕ್ಕಿಂತ ಹೆಚ್ಚು ತಡವಾಗಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆರ್‌ಟಿಐ ಕಾರ್ಯಕರ್ತರಿಗೆ ರಕ್ಷಣೆ ನೀಡುವ ಸಂಬಂಧ ಜಿಲ್ಲಾಮಟ್ಟದ ಸಮಿತಿ ಮತ್ತು ರಾಜ್ಯ ಮಟ್ಟದ ಸಮಿತಿ ಮೇಲ್ವಿಚಾರಣೆ ನೋಡಿಕೊಳ್ಳಲಿದೆ. ಅರ್ಜಿದಾರರಿಗೆ ಇರುವ ಬೆದರಿಕೆ ಅನುಸಾರವಾಗಿ ರಕ್ಷಣೆ ನೀಡಲಾಗುತ್ತದೆ. ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳನ್ನೊಳಗೊಂಡ ಜಿಲ್ಲಾಮಟ್ಟದ ಸಮಿತಿ ಸಭೆ ನಡೆಸಿ ರಕ್ಷಣೆ ನೀಡುವ ಪರಿಯನ್ನು ತೀರ್ಮಾನಿಸಲಿದೆ. ಇದು ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿರುತ್ತದೆ. ಒಂದೇ ರೀತಿಯಾದ ರಕ್ಷಣೆ ಇರುವುದಿಲ್ಲ. ಆರ್‌ಟಿಐ ಕಾರ್ಯಕರ್ತರಿಗೆ ಯಾವ ರೀತಿಯಲ್ಲಿ ಬೆದರಿಕೆ ಹಾಗೂ ಎಷ್ಟು ಮಟ್ಟಿಗೆ ಮಹತ್ವ ಇರುತ್ತದೆ ಎಂಬುದರ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಕ್ಷಣೆ ನೀಡಿದ ಬಳಿಕ ಅದರ ಕಾರ್ಯ ವೈಖರಿ ಕುರಿತು ಜಿಲ್ಲಾ ಮಟ್ಟದ ಸಮಿತಿ ಮೂರು ತಿಂಗಳಿಗೊಮ್ಮೆ ಪರಾಮರ್ಶಿಸಲಿದೆ. ಈ ಸಂದರ್ಭದಲ್ಲಿ ರಕ್ಷಣೆ ನೀಡುವುದು, ಹೆಚ್ಚಿಸುವುದು, ಮುಂದುವರಿಸುವುದು, ಕಡಿತಗೊಳಿಸುವುದು ಹಾಗೂ ಹಿಂಪಡೆಯುವ ಬಗ್ಗೆ ಚರ್ಚಿಸಲಾಗುತ್ತದೆ. ಇನ್ನು ಜಿಲ್ಲಾ ಮಟ್ಟದ ಸಮಿತಿಯ ನಿರ್ಧಾರಗಳ ಬಗ್ಗೆ ರಾಜ್ಯಮಟ್ಟದ ಸಮಿತಿಯು ಆರು ತಿಂಗಳಿಗೊಮ್ಮೆ ಪರಾಮರ್ಶಿಸಲಿದೆ ಎಂದು ಹೇಳಿದ್ದಾರೆ.

- ಪ್ರಭುಸ್ವಾಮಿ ನಟೇಕರ್, ಕನ್ನಡಪ್ರಭ

Follow Us:
Download App:
  • android
  • ios