ಮುಂಬೈ[ಮಾ.16]: ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಪಾದಚಾರಿ ಸೇತುವೆ ಕುಸಿದು ಬಿದ್ದು 6 ಮಂದಿ ಸಾವಿಗೀಡಾದ ಹಿನ್ನೆಲೆಯಲ್ಲಿ ಸೇತುವೆಯನ್ನು ಕೆಡವಲು ಬೃಹನ್‌ ಮುಂಬೈ ಮಹಾನಗರ ಪಾಲಿಕೆ ನಿರ್ಧರಿಸಿದೆ.

ನಗರ ಆಯುಕ್ತ ಅಜಯ್‌ ಮೆಹ್ತಾ ಅವರ ನೇತೃತ್ವದಲ್ಲಿ ಶುಕ್ರವಾರ ಮುಂಜಾನೆ ನಡೆದ ಸಭೆಯಲ್ಲಿ ಸೇತುವೆಯನ್ನು ಕೆಡವಲು ನಿರ್ಧರಿಸಲಾಗಿದೆ. ಅಲ್ಲದೇ ಸೇತುವೆಯ ಚಾವಣಿ ಕುಸಿದು ಬೀಳಲು ಕಾರಣ ಕಂಡುಕೊಳ್ಳಲು ಪಾಲಿಕೆ ಮುಖ್ಯ ಎಂಜಿನೀಯರ್‌ (ವಿಚಕ್ಷಣ ವಿಭಾಗ) ಅವರಿಂದ ತನಿಖೆಗೆ ಆದೇಶಿಸಲಾಗಿದ್ದು, 24 ಗಂಟೆಯ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ. ಇದರ ಬೆನ್ನಲ್ಲೇ ಸೇತುವೆಯನ್ನು ಕೆಡಗುವ ಕಾರ್ಯ ಆರಂಭಗೊಂಡಿದೆ.

ಇದೇ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಸೇತುವೆ ಕುಸಿಯಲು ಕಾರಣರಾದವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪಾಲಿಕೆ ಅಯುಕ್ತ ಅಜಯ್‌ ಮೆಹ್ತಾ ಅವರಿಗೆ ಸೂಚಿಸಿದ್ದಾರೆ.

ಬುಲೆಟ್‌ ರೈಲು ಯೋಜನೆ ನಿಲ್ಲಿಸಿ:

ಮುಂಬೈ ಪಾದಚಾರಿ ಸೇತುವೆ ಕುಸಿದು ಆರು ಮಂದಿ ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಬಹುಕೋಟಿ ವೆಚ್ಚದ ಬುಲೆಟ್‌ ರೈಲು ಯೋಜನೆಯನ್ನು ರದ್ದು ಮಾಡುವಂತೆ ಎನ್‌ಸಿಪಿ ಶುಕ್ರವಾರ ಆಗ್ರಹಿಸಿದೆ. ಬುಲೆಟ್‌ ರೈಲಿಗೆ ಸಾವಿರಾರು ಕೋಟಿ ರು. ಹಣ ಹೂಡುವ ಬದಲು ಆ ಹಣವನ್ನು ರೈಲ್ವೆ ಮೂಲ ಸೌಕರ್ಯ ಸುಧಾರಣೆಗೆ ಬಳಕೆ ಮಾಡಬೇಕು ಎಂದು ಎನ್‌ಸಿಪಿ ಶಾಸಕ ಜಿತೇಂದ್ರ ಅವ್ಹಾದ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬುಲೆಟ್‌ ರೈಲು ಯೋಜನೆಯನ್ನು ರದ್ದು ಮಾಡುವುದು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದು ಹೇಳಿದ್ದಾರೆ.

ಕಸಬ್ ಸೇತುವೆ ಎಂದು ಹೆಸರು ಬರಲು ಕಾರಣವೇನು?

'26/11 ಉಗ್ರ ದಾಳಿ' 2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ನಲ್ಲಿ ನಡೆದ ಉಗ್ರರ ದಾಳಿ ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸುಮಾರು 174 ಅಮಾಯಕರು ಈ ದಾಳಿಯಲ್ಲಿ ಸಾವನ್ನಪ್ಪಿದ್ದರು. ಅಂದು ದಾಳಿ ನಡೆಸಿದ್ದ ಅಜ್ಮಲ್ ಅಮೀರ್ ಕಸಬ್ ಹಾಗೂ ಇಸ್ಮಾಯಿಲ್ ಇದೇ ಸೇತುವೆಯನ್ನು ಬಳಸಿದ್ದರು. ಹೀಗಾಗಿ ಈ ಉಗ್ರ ದಾಳಿಯ ಬಳಿಕ ಈ ಸೇತುವೆಗೆ ಕಸಬ್ ಸೇತುವೆ ಎಂದೇ ಹೆಸರು ಬಂದಿತ್ತು.