Asianet Suvarna News Asianet Suvarna News

ವೃಕ್ಷ ಸಂರಕ್ಷಣಾ ಸಮಿತಿ ರಚಿಸಲು ನಿರ್ಲಕ್ಷ್ಯ!

ವೃಕ್ಷ ಸಂರಕ್ಷಣಾ ಸಮಿತಿ ರಚಿಸಲು ನಿರ್ಲಕ್ಷ್ಯ! ಬೆಂಗಳೂರು ಮರಗಳ ರಕ್ಷಣೆಗಾಗಿ ತಜ್ಞರ ಸಮಿತಿ ರಚನೆಗೆ ಆದೇಶಿಸಿದ್ದ ಹೈಕೋರ್ಟ್‌  | 2 ತಿಂಗಳಾದರೂ ಕ್ರಮ ಕೈಗೊಳ್ಳದ ಸರ್ಕಾರ

Govt not interested to forming forest reserve committee
Author
Bengaluru, First Published Jun 23, 2019, 8:51 AM IST

ಬೆಂಗಳೂರು (ಜೂ. 23): ನಗರದಲ್ಲಿ ಮರಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪರಿಸರ ತಜ್ಞರು, ವೃಕ್ಷ ತಜ್ಞರ ಒಳಗೊಂಡ ಸಮಿತಿ ರಚನೆಗೆ ಹೈಕೋರ್ಟ್‌ ಆದೇಶಿಸಿ ಎರಡು ತಿಂಗಳಾದರೂ ರಾಜ್ಯ ಸರ್ಕಾರದ ನಿರಾಸಕ್ತಿಯಿಂದ ಸಮಿತಿ ರಚನೆಯಾಗಿಲ್ಲ.

ಖಾಸಗಿ ಮತ್ತು ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗೆ ಅವೈಜ್ಞಾನಿಕವಾಗಿ ಮರ ಕತ್ತರಿಸಲಾಗುತ್ತಿದೆ ಎಂದು ದತ್ತಾತ್ರೇಯ ಟಿ.ದೇವರು ಹಾಗೂ ಬೆಂಗಳೂರು ಪರಿಸರ ಟ್ರಸ್ಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತ ಅರ್ಜಿ(ಪಿಐಎಲ್‌) ವಿಚಾರಣೆ ನಡೆಸಿದ ಹೈಕೋರ್ಟ್‌ ಕಳೆದ ಏ.23 ರಂದು ಮಧ್ಯಂತರ ಆದೇಶ ನೀಡಿ, ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976 ಅಡಿಯಲ್ಲಿ ತಜ್ಞರ ಒಳಗೊಂಡ ಸಮಿತಿ ರಚನೆಗೆ ರಾಜ್ಯಸರ್ಕಾರಕ್ಕೆ ನಿರ್ದೇಶಿಸಿತ್ತು. ಹೈಕೋರ್ಟ್‌ ಆದೇಶಿಸಿ ಸುಮಾರು ಎರಡು ತಿಂಗಳಾದರೂ ರಾಜ್ಯ ಸರ್ಕಾರ ‘ಮರ ಸಂರಕ್ಷಣಾ ತಜ್ಞರ ಸಮಿತಿ’ ರಚನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಮರ ಕಡಿಯಲು ಅನುಮತಿಯೂ ಇಲ್ಲ:

ನಗರದಲ್ಲಿ ಕಟ್ಟಡ, ಕಾರ್ಖಾನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗೆ ಮರ ಕಡಿಯಲು ಅನುಮತಿ ಕೋರಿ ಪ್ರತಿ ನಿತ್ಯ ಸುಮಾರು 15ರಿಂದ 20 ಮನವಿಗಳು ಪಾಲಿಕೆಯ ಅರಣ್ಯ ವಿಭಾಗಕ್ಕೆ ಬರುತ್ತವೆ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮೆಟ್ರೋ, ಬಿಬಿಎಂಪಿ, ರೈಲ್ವೆ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳಾದ ರಸ್ತೆ ಅಗಲೀಕರಣ, ಫ್ಲೈಓವರ್‌, ಅಂಡರ್‌ ಪಾಸ್‌, ಸ್ಕೈವಾಕ್‌ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗುವ ಮರಗಳ ತೆರವಿಗೆ ಬಿಬಿಎಂಪಿ ಅರಣ್ಯ ವಿಭಾಗ ಅನುಮತಿ ನೀಡುತ್ತಿಲ್ಲ.

ಕಾನೂನು ಘಟಕದ ಸಲಹೆ:

ಹೈಕೋರ್ಟ್‌ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ತಜ್ಞರ ಸಮಿತಿ ರಚನೆ ಕುರಿತು ಪಾಲಿಕೆ ಅರಣ್ಯ ವಿಭಾಗ ಕಾನೂನು ಘಟಕದ ಸಲಹೆ ಪಡೆದುಕೊಂಡಿದೆ. ಕಾನೂನು ವಿಭಾಗ ರಾಜ್ಯ ಸರ್ಕಾರದ ಮೂಲಕ ಸಮಿತಿ ರಚನೆಗೆ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜಪ್ಪ ಬಿಬಿಎಂಪಿ ಆಯುಕ್ತರಿಗೆ ಹಾಗೂ ಅರಣ್ಯ ಇಲಾಖೆಯ ಮುಖ್ಯಅಧಿಕಾರಿಗೆ ಪತ್ರ ಬರೆದು ತ್ವರಿತವಾಗಿ ಸಮಿತಿ ರಚನೆಗೆ ಕೋರಿದ್ದಾರೆ.

ಸಮಿತಿ ಕಾರ‍್ಯ:

ಪ್ರಸ್ತುತವಾಗಿ ಯಾವುದೇ ಮರ ತೆರವಿಗೆ ಅರ್ಜಿ ಬಂದರೆ, ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮರ ಕತ್ತರಿಸುವುದಕ್ಕೆ ಅನುಮತಿ ನೀಡುತ್ತಾರೆಯೇ ಹೊರತು ಮರ ಉಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಸಮಿತಿ ರಚನೆ ಮಾಡಿದಲ್ಲಿ, ಪರಿಸರ ತಜ್ಞರು, ಪರಿಣಿತರು ಮರವನ್ನು ಕಡಿಯಬಹುದೇ ಅಥವಾ ಸಂರಕ್ಷಿಸಬಹುದೇ ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಿದೆ. ಮರವನ್ನು ಉಳಿಸಲು ಸಾಧ್ಯವೇ ಇಲ್ಲ ಎಂದಾದರೆ ಮಾತ್ರ ಕಡಿಯಲು ಅವಕಾಶ ನೀಡುವಂತೆ ಸಮಿತಿ ನೋಡಿಕೊಳ್ಳಲಿದೆ. ಇದರಿಂದ ಅನಗತ್ಯ ಮರ ಕತ್ತರಿಸುವುದನ್ನು ನಿಯಂತ್ರಿಸಬಹುದು ಎಂಬುದು ಪರಿಸರ ಪ್ರೇಮಿಗಳ ವಾದವಾಗಿದೆ.

ಪ್ರಾಣವಾಯು, ಪರಿಸರ ಸಂರಕ್ಷಣೆಗೆ ಸರ್ಕಾರದ ಆಡಳಿತ ಯಂತ್ರಕ್ಕೆ ಸಮಯವಿಲ್ಲ. ಬಿಬಿಎಂಪಿ ಮೇಯರ್‌ ಒಂದು ಸಭೆ ಮಾಡಿ ಅಲ್ಪ ಸ್ವಲ್ಪ ಮಾಹಿತಿ ಪಡೆದಿದ್ದು ಬಿಟ್ಟರೆ ಯಾವುದೇ ಕ್ರಮವಾಗಿಲ್ಲ.

-ಯಲ್ಲಪ್ಪ ರೆಡ್ಡಿ, ಪರಿಸರವಾದಿ ಹಾಗೂ ಬೆಂಗಳೂರು ಪರಿಸರ ಟ್ರಸ್ಟ್‌ ಅಧ್ಯಕ್ಷ.

- ವಿಶ್ವನಾಥ ಮಲೆಬೆನ್ನೂರು 

 

Follow Us:
Download App:
  • android
  • ios