ಇತ್ತೀಚಿಗೆ ಕೆಲವು ವ್ಯಕ್ತಿಗಳು ಎಚ್‌ಆರ್‌ಪಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು, ಸ.ನಂ. 13ರಲ್ಲಿ 9.12 ಎಕರೆ, 14ರಲ್ಲಿ 3 ಎಕರೆ ಎಚ್‌ಆರ್‌ಪಿ ಸಂತ್ರಸ್ತರಿಗೆ ಕಾಯ್ದಿರಿಸಿರುವುದಾಗಿ ತಿದ್ದಿಸಿದ್ದಾರೆಂಬುದು ಸ್ಥಳೀಯರ ಆರೋಪ.

ಹಾಸನ(ಆ.02): ಸರ್ಕಾರಿ ಭೂಮಿ ಕಬಳಿಸಲು ವಂಚಕರು ಮುಂದಾಗಿದ್ದು, ಮೈಸೂರು ಮಹಾರಾಜರ ಕಾಲದಲ್ಲಿ ಪ್ರವಾಸಿ ಮಂದಿರಕ್ಕೆ ಕಾಯ್ದಿರಿಸಿದ್ದ ಭೂಮಿಗೆ ಕಣ್ಣು ಹಾಕಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕುರಬತ್ತೂರು ಗ್ರಾಮದಲ್ಲಿ ಮೈಸೂರು ಮಹರಾಜರ ಕಾಲದಲ್ಲಿಯೇ (ಸ್ವತಂತ್ರ ಪೂರ್ವದಲ್ಲಿಯೇ) ಪ್ರವಾಸಿ ಮಂದಿರಕ್ಕೆಂದು ಕಾಯ್ದಿರಿಸಿದ ಜಾಗವನ್ನು ಕೆಲವು ಮಧ್ಯರ್ವತಿಗಳು ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಕಬಳಿಸಲು ಮುಂದಾಗಿದ್ದಾರೆ.

ಕುರುಭತ್ತೂರು ಗ್ರಾಮದ ಸರ್ವೆ ನಂಬರ್‌ 13ರಲ್ಲಿ 18.3 ಎಕರೆ ಮತ್ತು ಸ.ನಂ. 14ರಲ್ಲಿ 6 ಎಕರೆ ಭೂಮಿಯನ್ನು ಸ್ವತಂತ್ರ ಪೂರ್ವದಲ್ಲಿಯೇ ಪ್ರವಾಸಿ ಮಂದಿರ ಉಪಯೋಗಕ್ಕೆ ಎಂದು ಕಾಯ್ದಿರಿಸಲಾಗಿದೆ. ಕಂದಾಯ ಇಲಾಖೆಯ ಪಹಣಿಯಲ್ಲಿಯೂ ಸಹ ಇದು ನಮೂದಾಗಿದೆ. ಆದರೆ ಇತ್ತೀಚಿಗೆ ಕೆಲವು ವ್ಯಕ್ತಿಗಳು ಎಚ್‌ಆರ್‌ಪಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು, ಸ.ನಂ. 13ರಲ್ಲಿ 9.12 ಎಕರೆ, 14ರಲ್ಲಿ 3 ಎಕರೆ ಎಚ್‌ಆರ್‌ಪಿ ಸಂತ್ರಸ್ತರಿಗೆ ಕಾಯ್ದಿರಿಸಿರುವುದಾಗಿ ತಿದ್ದಿಸಿದ್ದಾರೆಂಬುದು ಸ್ಥಳೀಯರ ಆರೋಪ.

ಹೇಮಾವತಿ ನದಿಗೆ ಗೊರೂರಿನಲ್ಲಿ ಡ್ಯಾಂ ಕಟ್ಟಿ 47 ವರ್ಷಗಳು ಕಳೆದಿವೆ. ಸದರಿ ಯೋಜನೆಯ ಬಹುತೇಕ ಸಂತ್ರಸ್ತರಿಗೆ ಈಗಾಗಲೆ ಬದಲಿ ಭೂಮಿ ಮಂಜೂರು ಮಾಡಿ ಸಾಗುವಳಿ ಚೀಟಿ ವಿತರಣೆ ಆಗಿದೆ. ಯಾವುದೇ ಒಬ್ಬ ಫಲಾನುಭವಿ 47 ವರ್ಷಗಳ ವರೆಗೆ ಬದಲಿ ಭೂಮಿ ಪಡೆಯದೆ ಇರುತ್ತಾರೆ ಎಂಬುದನ್ನು ನಂಬುವುದಕ್ಕೆ ಸಾಧ್ಯವಿದೆಯಾ ಎಂಬುದು ಗ್ರಾಮಸ್ಥರ ವಾದ. ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸೇರಿಕೊಂಡು ಮಲೆನಾಡಿನ ಗುಡ್ಡ, ದಿಣ್ಣೆ ಯಾವುದನ್ನೂ ಬಿಡುತ್ತಿಲ್ಲ.

ಇದೀಗ ಕುರುಬತ್ತೂರಿನಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿಯೇ ಪ್ರವಾಸಿ ಮಂದಿರಕ್ಕೆ ಬಿಟ್ಟ ಜಾಗವನ್ನೂ ಕಬಳಿಸಲು ಮುಂದಾಗಿರುವುದು ಖಂಡನೀಯ. ಜಿಲ್ಲಾಧಿಕಾರಿಗಳು ಈ ಬಗ್ಗೆ ತಕ್ಷಣ ವಿಚಾರಣೆ ನಡೆಸಿ ಹೇಮಾವತಿ ಜಲಾಶಯ ಸಂತ್ರಸ್ತರ ಹೆಸರಿನಲ್ಲಿ ಭೂ ಮಾಫಿಯಾವನ್ನು ತಡೆಯಬೇಕು ಹಾಗೂ ಈಗಾಗಲೆ ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡು ಹಕ್ಕುಪತ್ರ ನೀಡಿರುವುದನ್ನು ರದ್ದುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.