ಬೆಂಗಳೂರಿನ ಪ್ರಸಿದ್ಧ  ಗೋಪಾಲನ್​ ಮಾಲ್ ಮತ್ತು ಗೋಪಾಲನ್​ ಎಂಟರ್​ ಪ್ರೈಸೆಸ್​​ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರ ಬೆನ್ನಲ್ಲೇ, ಅದೇ ಗೋಪಾಲನ್​ ಎಂಟರ್​ ಪ್ರೈಸೆಸ್​​ ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹೈಕೋರ್ಟ್​ ಆದೇಶದಂತೆ ಸರ್ವೆ ನಡೆಸಿದ್ದ ಅಧಿಕಾರಿಗಳು ಒತ್ತುವರಿ ಆಗಿರೋದನ್ನು ಸಾಬೀತುಪಡಿಸಿ 2 ವರ್ಷದ ಹಿಂದೆಯೇ ವರದಿ ಸಲ್ಲಿಸಿದರೂ  ಇದುವರೆಗೂ ಒತ್ತುವರಿಯನ್ನು ತೆರವುಗೊಳಿಸ್ದೇ ಇರೋದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬೆಂಗಳೂರು(ಫೆ.22): ಬೆಂಗಳೂರಿನ ಪ್ರಸಿದ್ಧ ಗೋಪಾಲನ್​ ಮಾಲ್ ಮತ್ತು ಗೋಪಾಲನ್​ ಎಂಟರ್​ ಪ್ರೈಸೆಸ್​​ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರ ಬೆನ್ನಲ್ಲೇ, ಅದೇ ಗೋಪಾಲನ್​ ಎಂಟರ್​ ಪ್ರೈಸೆಸ್​​ ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹೈಕೋರ್ಟ್​ ಆದೇಶದಂತೆ ಸರ್ವೆ ನಡೆಸಿದ್ದ ಅಧಿಕಾರಿಗಳು ಒತ್ತುವರಿ ಆಗಿರೋದನ್ನು ಸಾಬೀತುಪಡಿಸಿ 2 ವರ್ಷದ ಹಿಂದೆಯೇ ವರದಿ ಸಲ್ಲಿಸಿದರೂ ಇದುವರೆಗೂ ಒತ್ತುವರಿಯನ್ನು ತೆರವುಗೊಳಿಸ್ದೇ ಇರೋದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸರ್ಕಾರವೇ ಶ್ರೀರಕ್ಷೆ!

ಬೆಂಗಳೂರು ನಗರದ ಸರ್ಕಾರಿ ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವ ಪಟ್ಟಿಗೆ ಈಗ ಗೋಪಾಲನ್​ ಎಂಟರ್​ಪ್ರೈಸೆಸ್​ ಕೂಡ ಸೇರ್ಪಡೆ ಆಗಿದೆ. ಕೆ.ಆರ್​.ಪುರಂ ಹೋಬಳಿಯ ಚಿನ್ನಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್ 17ರಲ್ಲಿದ್ದ 11 ಎಕರೆ ವಿಸ್ತೀರ್ಣದ ಕೆರೆ ಪ್ರದೇಶದಲ್ಲಿ ಗೋಪಾಲನ್​ ಎಂಟರ್​ಪ್ರೈಸೆಸ್ 10 ಗುಂಟೆ ಒತ್ತುವರಿ ಮಾಡ್ಕೊಂಡಿದೆ. ಒತ್ತುವರಿ ಆಗಿರೋದನ್ನು ಭೂ ದಾಖಲೆಗಳ ಜಂಟಿ ನಿರ್ದೇಶಕ ಜಯಪ್ರಕಾಶ್​ ಅವರು ಸಾಬೀತುಪಡಿಸಿ 2 ವರ್ಷಗಳ ಹಿಂದೆಯೇ ವರದಿ ಕೊಟ್ಟಿದ್ದಾರೆ. ಆದರೆ ವರದಿ ಆಧರಿಸಿ ಇದುವರೆಗೂ ಒಂದೇ ಒಂದು ಕ್ರಮ ತೆಗೆದುಕೊಂಡಿಲ್ಲ.

ಸರ್ವೆ ನಂಬರ್​ 17ರಲ್ಲಿ 11 ಎಕರೆ ಸರ್ಕಾರಿ ಕೆರೆ ಎಂದು ಆರ್​ಟಿಸಿಯಲ್ಲಿ ನಮೂದಿಸಲಾಗಿದೆ. ಆದರೂ ಇದೇ ಕೆರೆ ಪ್ರದೇಶದಲ್ಲಿ ಗೋಪಾಲನ್​ ಎಂಟರ್​ ಪ್ರೈಸೆಸ್​​ 10 ಗುಂಟೆ ಒತ್ತುವರಿ ಮಾಡಿಕೊಂಡು ಬರೋಬ್ಬರಿ 99 ಅಪಾರ್ಟ್​ಮೆಂಟ್​ ಕಟ್ಟಿದೆ.

ಇನ್ನು, ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತ ಸರ್ಕಾರಿ ಕೆರೆಗಳ ಒತ್ತುವರಿ ತೆರವುಗೊಳಿಸುವ ಸಂಬಂಧ ಸ್ಪೀಕರ್​ ಕೆ.ಬಿ.ಕೋಳಿವಾಡ ನೇತೃತ್ವದಲ್ಲಿ ಇರುವ ಸದನ ಸಮಿತಿಯೂ ಈ ಪ್ರಕರಣದಲ್ಲಿ ಮೌನ ವಹಿಸಿದೆ. ಅಷ್ಟೇ ಏಕೆ, ಈ ಪ್ರಕರಣ ಬಿಬಿಎಂಪಿ ಗಮನದಲ್ಲಿದೆ. ಆದರೂ ಬಿಬಿಎಂಪಿ ಇದಕ್ಕೂ ತನಗೂ ಯಾವುದೇ ಸಂಬಂಧ ಇಲ್ಲದ ಹಾಗೆ ವರ್ತಿಸುತ್ತಿದೆ. ಬಿಬಿಎಂಪಿಯ ಈ ನಡೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ವರದಿ: ಜಿ.ಮಹಾಂತೇಶ್​, ಸುವರ್ಣನ್ಯೂಸ್​