Asianet Suvarna News Asianet Suvarna News

ವಾರದಲ್ಲಿ ರೈತರ ಸಾಲಮನ್ನಾ ಆದೇಶ

ವಾರದಲ್ಲಿ ರೈತರ ಸಾಲಮನ್ನಾ ಬಗ್ಗೆ ಒಂದು ವಾರದೊಳಗೆ ಅಧಿಕೃತ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ

Govt Issue Order  in One Week Farm Loan Waiving Says Bandeppa Kashempur
Author
Bengaluru, First Published Jul 29, 2018, 11:05 AM IST

ಬೆಂಗಳೂರು :  ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿರುವ ರೈತರ ಸಾಲ ಮನ್ನಾ ಕುರಿತು ಮುಂದಿನ ಒಂದು ವಾರದೊಳಗೆ ಅಧಿಕೃತ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ. ಶುಕ್ರವಾರ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ಸಹಕಾರಿ ಬ್ಯಾಂಕ್‌ಗಳ ಸಾಲ ಮನ್ನಾ ಕಾರ್ಯಕ್ರಮವನ್ನು ರೈತರ ಹೆಸರಿನಲ್ಲಿ ಸಹಕಾರಿ ಬ್ಯಾಂಕ್‌ಗಳ ಕಾರ್ಯ ದರ್ಶಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುವುದು ಕಂಡು ಬಂದಿದೆ. 

ಬಹುತೇಕ ಕಡೆ ರೈತರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಕಾರ್ಯದರ್ಶಿಗಳೇ ಗುಳುಂ ಮಾಡಿದ್ದಾರೆ ಎಂಬ ದೂರುಗಳಿವೆ. ಹೀಗಾಗಿ ಸಾಲ ಮನ್ನಾ ಆದೇಶದ ಜತೆಗೆ ಹಲವು ನಿಯಮಾವಳಿ ರೂಪಿಸಲಾಗು ವುದು. ಪ್ರತಿಯೊಂದು ಸಹಕಾರಿ ಬ್ಯಾಂಕ್ ಮುಂದೆ ಸಾಲ ಮನ್ನಾ ಆದ ರೈತರು ಹಾಗೂ ಸಾಲದ ವಿವರವನ್ನು ಕಡ್ಡಾಯವಾಗಿ ಪ್ರದರ್ಶಿಸಲಾಗುವುದು ಎಂದು ಮಾಹಿತಿ ನೀಡಿದರು. 

ಶನಿವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಸರ್ಕಾರದ ಅವಧಿಯಲ್ಲಿ 8,165 ಕೋಟಿ ರು. ಸಾಲ ಮನ್ನಾ ಆಗಿತ್ತು. ಕುಮಾರಸ್ವಾಮಿ ಅವರು 2 ಲಕ್ಷ ರು. ವರೆಗಿನ ಸುಸ್ತಿ ಸಾಲ 148 ಕೋಟಿ ರು. ಹಾಗೂ 1 ಲಕ್ಷ ರು.ವರೆಗಿನ ಚಾಲ್ತಿ ಸಾಲ ಸೇರಿ 9,448  ಕೋಟಿ ರು. ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಘೋಷಿಸಿದ್ದಾರೆ. ಇದರಿಂದ 20 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದರು.

ಸಹಕಾರಿ ಬ್ಯಾಂಕ್‌ಗಳಲ್ಲೂ ಋಣಮುಕ್ತ ಪತ್ರ: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 8,165 ಕೋಟಿ ರು. ಸಾಲದ ಪೈಕಿ 4,971 ಕೋಟಿ ರು. ಬಿಡುಗಡೆ ಮಾಡಿದ್ದರು. ಉಳಿದ ಸಾಲದ ಹೊರೆಯನ್ನೂ ತೀರಿಸುವುದಾಗಿ ಹೇಳಿದ್ದೇವೆ. ಈ ಪೈಕಿ ಶುಕ್ರವಾರ 1 ಸಾವಿರ ಕೋಟಿ ರು. ಹಣವನ್ನು ಸಹಕಾರಿ ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡಲಾಗಿದೆ. ಉಳಿದಂತೆ ರೈತರ ಸಾಲವನ್ನು ಅವರ ಗಡುವಿನ  ಆಧಾರದ ಮೇಲೆ ತೀರಿಸಲಾಗುವುದು. ರೈತರಿಗೆ ಹೊಸ ಸಾಲ ನೀಡಲು ಸಮಸ್ಯೆಯಾಗದಂತೆ ಪ್ರತಿಯೊಬ್ಬ ರೈತರಿಗೂ ಋಣಮುಕ್ತ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲದ ಬಗ್ಗೆ ಹಣಕಾಸು ಇಲಾಖೆ ಬ್ಯಾಂಕ್‌ಗಳೊಂದಿಗೆ ಚರ್ಚೆ ನಡೆಸುತ್ತಿದೆ. ಬ್ಯಾಂಕ್ ಅಧಿಕಾರಿಗಳು ಸಹ ಸರ್ಕಾರದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಬ್ಯಾಂಕ್‌ಗಳ ಮಂಡಳಿ ಸಭೆಗಳಲ್ಲಿ ವಿಷಯವನ್ನು ಪ್ರಸ್ತಾಪಿಸಿ ಒಪ್ಪಿಗೆ ಪಡೆಯುತ್ತಾರೆ. ಬಳಿಕ ಎಂಒಯು ಮಾಡಿಕೊಂಡು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು. 

Follow Us:
Download App:
  • android
  • ios