Asianet Suvarna News Asianet Suvarna News

ರೈತರ ಹೋರಾಟಕ್ಕೆ ಮಣಿದ ಸರಕಾರ; ರಾತ್ರಿಯಿಂದಲೇ ನೀರು ಬಿಡುಗಡೆ; ಆದರೆ, ಜಮೀನಿಗಲ್ಲ; ಕೆರೆಕಟ್ಟೆಗಳಿಗಷ್ಟೇ ನೀರು

ಈ ಪರಿಸ್ಥಿತಿಯಲ್ಲಿ ರೈತರು ಭತ್ತ ಮತ್ತು ಕಬ್ಬು ಬದಲು ಮಳೆಯಾಧಾರಿತ ಬೆಳೆ ಬೆಳೆಯಬೇಕೆಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ನೀರನ್ನು ಹೆಚ್ಚು ಬೇಡುವ ಈ ಬೆಳೆಗಳನ್ನು ಬೆಳೆದರೆ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಇವುಗಳಿಗೆ ನೀರು ಬಿಡುವಷ್ಟು ಸಂಗ್ರಹ ಜಲಾಶಯಗಳಲ್ಲಿಲ್ಲ ಎಂದವರು ಎಚ್ಚರಿಸಿದ್ದಾರೆ.

govt decides to release water from four reservoirs

ಮಂಡ್ಯ(ಆ. 09): ಬರದಿಂದ ಕಂಗೆಟ್ಟಿರುವ ಮಂಡ್ಯ ಮತ್ತಿತರ ಜಿಲ್ಲೆಗಳ ರೈತರ ಹೋರಾಟಕ್ಕೆ ರಾಜ್ಯ ಸರಕಾರ ಕೊನೆಗೂ ಮಣಿದಿದೆ. ಕೆಆರ್'ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಿಂದ ನೀರು ಬಿಡಲು ಸರಕಾರ ನಿರ್ಧರಿಸಿದೆ. ಇಂದು ಮಧ್ಯರಾತ್ರಿಯಿಂದಲೇ ನೀರು ಹರಿಸಲಾಗುತ್ತಿದೆ. ಇದರೊಂದಿಗೆ ಬರಪೀಡಿತ ರೈತರಿಗೆ ತುಸು ಸಮಾಧಾನವಾದಂತಾಗಿದೆ. ಆದರೆ, ರೈತರ ಜಮೀನಿಗೆ ನೀರು ಬಿಡಲಾಗುವುದಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವುದು ಸರಕಾರದ ಉದ್ದೇಶವಾಗಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು 'ಕೃಷ್ಣಾ'ದಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸಿಎಂ ಜೊತೆಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಕೃಷಿ ಸಚಿವ ಕೃಷ್ಣ ಭೈರೇಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಹಾಗೂ ಮಂಡ್ಯ ಸಂದರು ಮತ್ತು ಶಾಸಕರು ಭಾಗಿಯಾಗಿದ್ದರು.  ಸಭೆಯಲ್ಲಿ ಕೆಆರ್​​​​ಎಸ್ ಜಲಾಶಯದ ‌ನೀರಿನ ಮಟ್ಟ, ಕೃಷಿ ಜಮೀನಿಗೆ ನೀರು ಹರಿಸಲು ಇರುವ ಅನನುಕೂಲತೆ ಹಾಗೂ ಸಂಕಷ್ಟ ಸೂತ್ರದಂತೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಿತೆನ್ನಲಾಗಿದೆ.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಕಾವೇರಿ ಜಲಾಯನ ಪ್ರದೇಶದ ಕೆರೆ ಕಟ್ಟೆಗಳನ್ನು ತುಂಬಿಸುವ ಸಲುವಾಗಿ ನಾಲ್ಕು ಜಲಾಶಯಗಳಿಂದ ನೀರು ಹರಿಸಲಾಗುವುದು ಎಂದು ತಿಳಿಸಿದ್ದಾರೆ. "ಕಳೆದ 60 ವರ್ಷದಲ್ಲೇ ಅತ್ಯಂತ ಕಡಿಮೆ ಪ್ರಮಾಣದ ಮಳೆಯಾಗಿದೆ. ಕಳೆದ ವರ್ಷಕ್ಕಿಂತ 8 ಟಿಎಂಸಿ ನೀರು ಕಡಿಮೆ ಇದೆ. ರೈತರ ಜಮೀನಿಗೆ ಬಿಡುವಷ್ಟು ನೀರು ಸಂಗ್ರಹವಿಲ್ಲ. ಕುಡಿಯುವ ನೀರು, ಜಾನುವಾರುಗಳಿಗೆ ನೀರು ಬಹಳ ಮುಖ್ಯ. ಕೆರೆ ಕಟ್ಟೆಗಳಿಗೆ ತುಂಬಿಸುವುದು ಅಗತ್ಯ. ಹೀಗಾಗಿ, ನಾಳೆಯಿಂದ ಕೆರೆಗಳನ್ನು ತುಂಬಿಸಲು ನೀರು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಈ ಪರಿಸ್ಥಿತಿಯಲ್ಲಿ ರೈತರು ಭತ್ತ ಮತ್ತು ಕಬ್ಬು ಬದಲು ಮಳೆಯಾಧಾರಿತ ಬೆಳೆ ಬೆಳೆಯಬೇಕೆಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ನೀರನ್ನು ಹೆಚ್ಚು ಬೇಡುವ ಈ ಬೆಳೆಗಳನ್ನು ಬೆಳೆದರೆ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಇವುಗಳಿಗೆ ನೀರು ಬಿಡುವಷ್ಟು ಸಂಗ್ರಹ ಜಲಾಶಯಗಳಲ್ಲಿಲ್ಲ ಎಂದವರು ಎಚ್ಚರಿಸಿದ್ದಾರೆ.

Follow Us:
Download App:
  • android
  • ios