ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 11 ಸಾವಿರ ಗುತ್ತಿಗೆ ಪೌರ ಕಾರ್ಮಿಕರನ್ನು ನೇರ ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

ಬೆಂಗಳೂರು (ಜು.12): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 11 ಸಾವಿರ ಗುತ್ತಿಗೆ ಪೌರ ಕಾರ್ಮಿಕರನ್ನು ನೇರ ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದಕ್ಕಾಗಿ ವಿಶೇಷ ನೇಮಕ ನಿಯಮಗಳನ್ನು ರೂಪಿಸಿದ್ದು, ಅದರಲ್ಲಿ ಪೌರ ಕಾರ್ಮಿಕರಿಗೆ ₹ 8 ಸಾವಿರದವರೆಗೂ ವೇತನ ಹೆಚ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೊಸ ನಿಯಮ ಸದ್ಯದಲ್ಲೇ ಜಾರಿಯಾಗಲಿದ್ದು, ನೇಮಕ ಪ್ರಕ್ರಿಯೆ ಹಂತಹಂತವಾಗಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದ್ದು, ನೇಮಕಕ್ಕೆ ಪೂರಕವಾಗಿ ವಿಶೇಷ ನಿಯಮಗಳನ್ನು ಅನುಮೋದಿಸಲಾಗಿದೆ.ಸಂಪುಟ ಸಭೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ರಾಜ್ಯದಲ್ಲಿ ಸದ್ಯ 13,039 ಹೊರ ಗುತ್ತಿಗೆ ಕಾರ್ಮಿಕರನ್ನು ನೇರ ನೇಮಕ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಈಗಾಗಲೇ ಗುತ್ತಿಗೆ ಆಧಾರದಲ್ಲಿ ಸಾವಿರಾರು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ನೇರವಾಗಿ ಸಕ್ರಮಗೊಳಿಸಲು ಸುಪ್ರೀಂಕೋರ್ಟ್ ಆದೇಶ ಅಡ್ಡ ಬರುತ್ತದೆ. ಆದ್ದರಿಂದ ಇರುವವರನ್ನೇ ನೇರ ನೇಮಕ ಮಾಡಿಕೊಳ್ಳುವ ಮೂಲಕ ಕಾಯಂ ಮಾಡಲು ವಿಶೇಷ ನೇಮಕ ನಿಯಮ ರೂಪಿಸಲಾಗಿದ್ದು, ಸಂಪುಟದಲ್ಲಿಟ್ಟು ಒಪ್ಪಿಗೆ ಪಡೆಯಲಾಗಿದೆ ಎಂದರು. ಸದ್ಯ ಬಿಬಿಎಂಪಿಯಲ್ಲಿ 5,413 ಹುದ್ದೆಗಳು ಖಾಲಿ ಇವೆ. ಇದನ್ನು ನೇರ ನೇಮಕ ಮೂಲಕ ಭರ್ತಿ ಮಾಡಲಾಗುತ್ತದೆ. ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ 5,476 ಹುದ್ದೆಗಳನ್ನೂ ನೇರ ನೇಮಕ ಮಾಡಲಾಗುತ್ತದೆ. ಈ ಎಲ್ಲಾ ಹುದ್ದೆಗಳನ್ನು ಹಂತಹಂತವಾಗಿ ತುಂಬುವ ಮೂಲಕ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ನೇರ ನೇಮಕ ಮಾಡಿಕೊಳ್ಳುತ್ತಿದ್ದಂತೆ ಅವರ ವೇತನ ₹8 ಸಾವಿರ ಹೆಚ್ಚಾಗುತ್ತದೆ. ಅಂದರೆ ಗುತ್ತಿಗೆ ನೌಕರರು ಈಗಾಗಲೇ ₹17 ಸಾವಿರ ವೇತನ ಪಡೆಯುತ್ತಿದ್ದು, ಕಾಯಂ ಆಗುತ್ತಿದ್ದಂತೆ ₹25 ಸಾವಿ ವೇತನ ಪಡೆಯಲಿದ್ದಾರೆ. ಇದಲ್ಲದೆ ಹೊರ ಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ₹17 ಸಾವಿರ ವೇತನ ನೀಡಲಾಗುತ್ತದೆ. ಅದನ್ನು ಸ್ಥಳೀಯ ಸಂಸ್ಥೆಗಳೇ ನೇರವಾಗಿ ನೀಡುವಂತೆ ಮಾಡಲು ನಿರ್ಧರಿಸಲಾಗಿದೆ. ಒಟ್ಟಾರೆ ಸಂಪುಟದ ನಿರ್ಧಾರದಿಂದ ರಾಜ್ಯದಲ್ಲಿರುವ 35 ಸಾವಿರ ಮಂದಿಗೆ ಅನುಕೂಲವಾಗಲಿದ್ದು, ಸೌಲಭ್ಯಗಳನ್ನು ಒದಗಿಸಲು ₹336 ಕೋಟಿವರೆಗೂ ವೆಚ್ಚವಾಗಲಿದೆ ಎಂದು ಜಯಚಂದ್ರ ವಿವರಿಸಿದರು.

ನಿವೃತ್ತ ಪೊಲೀಸರಿಗೂ ಆರೋಗ್ಯ ಭಾಗ್ಯ

ರಾಜ್ಯ ಸರ್ಕಾರ ಈಗಾಗಲೇ ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಕಾರ್ಯಕ್ರಮದ ಮೂಲಕ ಆರೋಗ್ಯ ವಿಮೆ ಸಿಗುವಂತೆ ಮಾಡಿದೆ. ಇದನ್ನು ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ನಿವೃತ್ತರಾಗಿರುವ ಪೊಲೀಸ್ ಇಲಾಖೆ ಸಿಬ್ಬಂದಿಗಾಗಿ ಯಾವುದೇ ಯೋಜನೆಗಳಿಲ್ಲದ ಕಾರಣ ಸರ್ಕಾರ ನಿವೃತ್ತರಿಗೂ ಯೋಜನೆ ರೂಪಿಸಲು ನಿರ್ಧರಿಸಿದೆ. ಪೊಲೀಸ್ ಇಲಾಖೆಯ ನಿವೃತ್ತ ನೌಕರರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಯೋಜನೆ ಆರಂಭಿಸಲು ಪ್ರಥಮ ಹಂತವಾಗಿ ₹ 20 ಕೋಟಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಇದರಲ್ಲಿ ನಿವೃತ್ತ ನೌಕರರು ಮತ್ತು ಅವರ ಕುಟುಂಬದವರಿಗೆ ಉಚಿತ ಆರೋಗ್ಯ ಸೇವೆ ಮತ್ತು ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಇದನ್ನು ನಿರ್ವಹಿಸಲು ಆರೋಗ್ಯ ನಿಧಿಯೊಂದನ್ನು ಸ್ಥಾಪಿಸಲಾಗುತ್ತದೆ ಎಂದು ಸಚಿವ ಜಯಚಂದ್ರ ತಿಳಿಸಿದರು. ರಾಜ್ಯದ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ₹3,585 ಕೋಟಿ ಬೋಧನಾ ಶುಲ್ಕವನ್ನು ಸರ್ಕಾರಕ್ಕೆ ಜಮೆ ಮಾಡದೆ ಸರ್ಕಾರಕ್ಕೆ ಉಳಿಸಿಕೊಳ್ಳಲಾಗಿದೆ. ಅದನ್ನು ಈಗ ಬೋಧನಾ ಶುಲ್ಕವನ್ನಾಗಿ ಬಳಸಿಕೊಳ್ಳಲು ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.