Asianet Suvarna News Asianet Suvarna News

ಕಾವೇರಿ ಬಿಕ್ಕಟ್ಟು; ಅಧಿವೇಶನದ ಬಳಿಕ ಸರ್ಕಾರ ಸುಪ್ರೀಂಗೆ ಏನು ಹೇಳಬಹುದು?

Govt Decided to Explain About Cauvery Decision

ಬೆಂಗಳೂರು (ಸೆ.22): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದಿಲ್ಲ ಎಂಬ ನಿರ್ಣಯ ಕೈಗೊಂಡ ಮೇಲೆ ಸರ್ವೋಚ್ಚ ನ್ಯಾಯಾಲಯಕ್ಕೆ ಈ ನಿರ್ಣಯದ ಕುರಿತು ವಿವರ ನೀಡಲು ಸರ್ಕಾರಕ್ಕೆ ಉನ್ನತ ಮಟ್ಟದ ಕಾನೂನು ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಪ್ರಜಾತಂತ್ರದ ಪರಮೋಚ್ಚ ಅಂಗವಾದ ಶಾಸಕಾಂಗ  ಕೈಗೊಂಡ ನಿರ್ಣಯದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ.ಮಾಡಿದರೆ ಸದನದ ಹಕ್ಕುಚ್ಯುತಿಯಾಗುತ್ತದೆ ಎಂದು ರಾಜ್ಯದ ಪರ ವಕೀಲ ನಾರೀಮನ್ ಸುಪ್ರೀಂಕೋರ್ಟ್ ಗೆ ವಿವರಿಸಲಿದ್ದಾರೆ. ಯಾವ ಕಾರಣಕ್ಕೂ ಸದನದ ಸದಸ್ಯರ ಹಕ್ಕುಚ್ಯುತಿ ಮಾಡಲು ತಮ್ಮ ಸರ್ಕಾರ ತಯಾರಿಲ್ಲ ಎಂದು ಸುಪ್ರೀಂಕೋರ್ಟ್ ಗೆ ವಿವರಿಸಲು ತೀರ್ಮಾನಿಸಲಾಗಿದೆ.

ಉನ್ನತ ಮೂಲಗಳ ಪ್ರಕಾರ ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಏನು ಮಾಡಬಹುದು?ಅನ್ನುವ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೂಲಂಕುಷ ಚರ್ಚೆ ನಡೆದಿದ್ದು ಅಂತಿಮವಾಗಿ ಸಂಪುಟದ ಎಲ್ಲ ಸದಸ್ಯರು,ಆಗಿದ್ದಾಗಲೀ,ಜೈಲಿಗೆ ಹೋಗುವ ಸ್ಥಿತಿ ಬಂದರೂ ನಾವು ಸಿದ್ಧ ಎಂದಿದ್ದಾರೆ ಎಂದಿವೆ.
 

ಸುಪ್ರೀಂ ನಡೆ ಏನಿರಬಹುದು?

ಒಂದು ವೇಳೆ ತನ್ನ ತೀರ್ಪಿನ ಅನುಸಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿಲ್ಲ  ಎಂಬ ಕಾರಣಕ್ಕಾಗಿ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಹೂಡಲು ಸಜ್ಜಾಗಬಹುದು.
ಆದರೆ ಯಾರ ವಿರುದ್ಧ ನ್ಯಾಯಾಂಗ ಮೊಕದ್ದಮೆ ಹೂಡುತ್ತದೆ?ಮುಖ್ಯಮಂತ್ರಿಯ ಮೇಲಾ?ಮುಖ್ಯ ಕಾರ್ಯದರ್ಶಿಯ ಮೇಲಾ?ಅಥವಾ ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸುವ ಎಲ್ಲರ ಮೇಲಾ?ಹೀಗಾಗಿ ನ್ಯಾಯಾಲಯ ಆ ಕ್ರಮಕ್ಕೆ ಮುಂದಾಗುವುದು ಕಷ್ಟ.
ನೀರು ಬಿಡಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದ ಕೂಡಲೇ ಉದಯ್ ಲಲಿತ್ ಅವರಿರುವ ಪೀಠ,ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಬಹುದು.
ಹಾಗೇನಾದರೂ ಆದರೆ ಮುಖ್ಯನ್ಯಾಯಮೂರ್ತಿಗಳು ತಾವೂ ಇರುವ ಅಥವಾ ತಾವು ಇಲ್ಲದಿರುವ ಐದು ಅಥವಾ ಏಳು ಮಂದಿ ನ್ಯಾಯಮೂರ್ತಿಗಳಿರುವ ಸಂವಿಧಾನ ಪೀಠವನ್ನು ರಚಿಸಿ ಅದರ ಮುಂದೆ ಈ ಪ್ರಕರಣವನ್ನು ವರ್ಗಾವಣೆ ಮಾಡಬಹುದು.
 

ನಾರಿಮನ್ ವಾದವೇನು?

ಮೊದಲನೆಯದಾಗಿ ವಿಷಯ ಸರ್ವೋಚ್ಚ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ.ಸಾಲದು ಎಂಬಂತೆ ಮೂರು ಬಾರಿ ತೀರ್ಪು ನೀಡಿದ ಸುಪ್ರೀಂಕೋರ್ಟ್ ನಡೆಯೇ ತಪ್ಪು ಎಂಬುದು ನಾರೀಮನ್ ವಾದ. ಈ ಮಧ್ಯೆ  ಕಾಲ ಕಾಲಕ್ಕೆ ಉಂಟಾಗುವ ವಿವಾದವನ್ನು ಪರಿಹರಿಸಲು ಕಾವೇರಿ ಮೇಲುಸ್ತುವಾರಿ ಸಮಿತಿ ಇರುವಾಗ ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸುವ ಅಗತ್ಯವೇ ಇರಲಿಲ್ಲ ಎಂದು ರಾಜ್ಯದ ಪರ ವಕೀಲ ನಾರೀಮನ್ ಸರ್ಕಾರಕ್ಕೆ ವಿವರ ನೀಡಿದ್ದಾರೆ ಎಂದು ಈ ಮೂಲಗಳು ಹೇಳಿವೆ.
ರಾಜ್ಯಾಂಗಕ್ಕೆ ಸಂಬಂಧಿಸಿದ ಬಿಕ್ಕಟ್ಟಿನ ಪರಿಹಾರಕ್ಕೆ ಸಂವಿಧಾನ ಪೀಠ ಮಧ್ಯೆ ಪ್ರವೇಶಿಸುವುದು ಅನಿವಾರ್ಯವಾದ್ದರಿಂದ ಇಂತಹ ಪೀಠ ರಚನೆಯಾದರೂ ಕರ್ನಾಟಕ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತೆ.ಯಾಕೆಂದರೆ ಅದು ರಚನೆಯಾಗಿ ಅದರ ಮುಂದೆ ಪ್ರಕರಣ ಬರುವಷ್ಟರಲ್ಲಿ ತುಂಬ ದಿನಗಳೇ ಕಳೆದಿರುತ್ತದೆ ಎಂಬುದು ನಾರೀಮನ್ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. 
 

ರಾಷ್ಟ್ರಪತಿ ಅಂಗಳಕ್ಕೆ ಚೆಂಡು

ಒಂದು ವೇಳೆ ತನ್ನ ಆದೇಶ ಪಾಲನೆ ಆಗಿಲ್ಲವೆಂದು ರಾಜ್ಯ ಸರ್ಕಾರವನ್ನು ವಜಾ ಮಾಡುವ ಮಟ್ಟಕ್ಕೆ ಸುಪ್ರೀಂಕೋರ್ಟ್ ಹೋಗಬಹುದೇ?ಎಂಬ ಪ್ರಶ್ನೆಗೆ ವಿವರ ನೀಡಿರುವ ಮೂಲಗಳು ಇಂತಹ ಸಂದರ್ಭದಲ್ಲಿ ವಿವಾದದ ಚೆಂಡು ರಾಷ್ಟ್ರಪತಿ ಇಲ್ಲವೇ ಪ್ರಧಾನಿಯವರ ಅಂಗಳಕ್ಕೂ ಹೋಗುವ ಸಾಧ್ಯತೆ ಇದೆ ಎಂದಿವೆ.
ಈ ಮಧ್ಯೆ ವಿಧಾನಮಂಡಲ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಕ್ಕೆ ಬದ್ಧರಾಗಿರಿ.ಏನೇ ಆದರೂ ಆ ನಿರ್ಣಯದಿಂದ ಹಿಂದೆ ಸರಿಯಬೇಡಿ ಎಂದು ನಾರೀಮನ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದ್ದು  ಒಂದು ವೇಳೆ ನೀರು ಬಿಡಲ್ಲ ಎಂಬ ವಿಧಾನಮಂಡಲದ ನಿರ್ಣಯದಿಂದ ಹಿಂದೆ ಸರಿದರೆ ಕಾವೇರಿ ನದಿ ವಿವಾದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಮುಂದೆ ಇನ್ನು ವಾದ ಮಾಡುವುದಿಲ್ಲ ಎಂದು ನಾರೀಮನ್ ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಶುಕ್ರವಾರ ನಡೆಯಲಿರುವ ವಿಧಾನಮಂಡಲ ಅಧಿವೇಶನ ತೀವ್ರ ಕುತೂಹಲ ಕೆರಳಿಸಿದ್ದು ಮುಂದೇನಾಗಲಿದೆ ಎಂಬುದನ್ನು ಕಾದು ನೋಡುವಂತೆ ಮಾಡಿದೆ.

Follow Us:
Download App:
  • android
  • ios