ರಾಜ್ಯದಲ್ಲಿ ಈಗಾಗಲೇ 9.72 ಲಕ್ಷ ಕ್ವಿಂಟಲ್ ತೊಗರಿ ಖರೀದಿಸಿದ್ದರೂ ಇನ್ನೂ ಇದಕ್ಕೂ ಹೆಚ್ಚು ಪ್ರಮಾಣದ ತೊಗರಿ ಲಭ್ಯ ಇರುವುದರಿಂದ ಬರುವ ಮಾರ್ಚ್ ೧೫ರೊಳಗೆ ಬೆಂಬಲ ಬೆಲೆ ಮೂಲಕ ಖರೀದಿ ಪ್ರಕ್ರಿಯೆ ಮುಗಿಸಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಖರೀದಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಬೆಂಗಳೂರು (ಫೆ.22): ರಾಜ್ಯದಲ್ಲಿ ಈಗಾಗಲೇ 9.72 ಲಕ್ಷ ಕ್ವಿಂಟಲ್ ತೊಗರಿ ಖರೀದಿಸಿದ್ದರೂ ಇನ್ನೂ ಇದಕ್ಕೂ ಹೆಚ್ಚು ಪ್ರಮಾಣದ ತೊಗರಿ ಲಭ್ಯ ಇರುವುದರಿಂದ ಬರುವ ಮಾರ್ಚ್ ೧೫ರೊಳಗೆ ಬೆಂಬಲ ಬೆಲೆ ಮೂಲಕ ಖರೀದಿ ಪ್ರಕ್ರಿಯೆ ಮುಗಿಸಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಖರೀದಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಇಂದು ನಡೆದ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಈವರೆಗೆ 37,636 ರೈತರಿಗೆ ತೊಗರಿ ಖರೀದಿಸಲಾಗಿದೆ. ಆದರೆ ಖರೀದಿ ಕೇಂದ್ರಗಳಲ್ಲಿ ಒಟ್ಟು 1.20 ಲಕ್ಷ ರೈತರು ತೊಗರಿ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ. ಅಂದರೆ ಇನ್ನೂ ಸುಮಾರು 87 ಸಾವಿರ ರೈತರ ಬಳಿ ತೊಗರಿ ಧಾನ್ಯ ಲಭ್ಯವಿದೆ ಎಂದು ಹೇಳಿದರು.
ಸದ್ಯ ರಾಜ್ಯದಲ್ಲಿ 5,240 ರು. ದರದಲ್ಲಿ ತೊಗರಿ ಖರೀದಿ ಪ್ರಕ್ರಿಯೆ 100 ಖರೀದಿ ಕೇಂದ್ರಗಳಲ್ಲಿ ನಡೆದಿದೆ. ಹೆಚ್ಚುವರಿಯಾಗಿ ಇನ್ನೂ ೧೦೦ ಖರೀದಿ ಕೇಂದ್ರಗಳನ್ನು ತೆರೆದರೂ ಮುಂದಿನ 20 ದಿನಗಳಲ್ಲಿ ಈ ಪ್ರಕ್ರಿಯೆ ಮುಗಿಯಲು ಸಾಧ್ಯವಿಲ್ಲ. ಆದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ತಲಾ ೩೦ ಸಾವಿರ ರು. ಆರ್ಥಿಕ ನೆರವು ನೀಡಿ, ಆ ಮೂಲಕ ತೊಗರಿ ಖರೀದಿಗೆ ಸರ್ಕಾರ ಆಲೋಚಿಸುತ್ತಿದೆ ಎಂದರಲ್ಲದೇ. ಈ ಪ್ರಯೋಗ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನಾಫೆಡ್‌ಗೆ ಮೊರೆ ಹೋಗುವ ಬದಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ಧಾನ್ಯಗಳ ಪ್ರಕ್ರಿಯೆ ನಡೆಸಬಹುದು ಎಂದು ತಿಳಿಸಿದರು.
ಕೊಬ್ಬರಿಗೆ 9 ಸಾವಿರ ದರ ನಿಗದಿಗೆ ಶಿಫಾರಸು
ರಾಜ್ಯದಲ್ಲಿ ಕೊಬ್ಬರಿಗೆ ಪ್ರಸಕ್ತ ಜನವರಿಯಿಂದ ಡಿಸೆಂಬರ್‌ವರೆಗಿನ ಹಂಗಾಮಿಗೆ ಕನಿಷ್ಠ 9 ಸಾವಿರ ರು. ದರ ನಿಗದಿಪಡಿಸಿ, ಅದರ ಮೇಲೆ ರಾಜ್ಯ ಮತ್ತು ಕೇಂದ್ರದಿಂದ ತಲಾ ಒಂದು ಸಾವಿರ ರು. ಬೋನಸ್ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಸಚಿವ ಜಯಚಂದ್ರ ತಿಳಿಸಿದರು.
ಪ್ರಸಕ್ತ ಕೊಬ್ಬರಿ ಕ್ವಿಂಟಾಲ್‌ಗೆ 6240 ರು. ದರದಲ್ಲಿ ಖರೀದಿ ನಡೆಯುತ್ತಿದೆ. ಮುಂದಿನ ಹಂಗಾಮಿಗೆ ಕೊಬ್ಬರಿಗೆ ಕ್ವಿಂಟಾಲ್‌ಗೆ 11529 ರು. ರೈತರಿಗೆ ವೆಚ್ಚವಾಗಲಿದೆ. ಹೀಗಾಗಿ ಕನಿಷ್ಠ ಮಾರಾಟ ದರವನ್ನು 9 ಸಾವಿರ ರು. ನಿಗದಿ ಮಾಡಲು ರಾಜ್ಯ ಸರ್ಕಾರ ಕೋರಿದೆ. ಆದರೆ ಕೇಂದ್ರ ಕೃಷಿ ವೆಚ್ಚ ಹಾಗೂ ದರ ಆಯೋಗವು ಕ್ವಿಂಟಾಲ್‌ಗೆ 6900 ರು. ನಿಗದಿ ಮಾಡಿದೆ. ಹೀಗಾಗಿ ಕನಿಷ್ಠ ದರ 9 ಸಾವಿರ ರು. ನಿಗದಿಪಡಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಲಾ ಒಂದು ಸಾವಿರ ರು. ಬೋನಸ್ ನೀಡಲು ಸರ್ಕಾರ ಕೋರಿದೆ. ಕೇಂದ್ರದ ಪ್ರತಿಕ್ರಿಯೆ ಆಧರಿಸಿ, ರಾಜ್ಯ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
