ನವದೆಹಲಿ[ಡಿ.05]: ಜೈವಿಕ ಇಂಧನ ವಾಹನಗಳ ಬಳಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜೈವಿಕ ಇಂಧನ ಮತ್ತು ಡೀಸೆಲ್‌ ಬಳಸಬಹುದಾದ ಟ್ರಾಕ್ಟರ್‌ ಮತ್ತು ಕಟ್ಟಡ ನಿರ್ಮಾಣದ ವಾಹನಗಳನ್ನು 1989ರ ಕೇಂದ್ರೀಯ ಮೋಟರ್‌ ವಾಹನ ನಿಯಮಕ್ಕೆ ಸೇರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಕೃಷಿಗೆ ಬಳಸಬಹುದಾದ ಟ್ರಾಕ್ಟರ್‌, ಪವರ್‌ ಟಿಲ್ಲರ್‌ಗಳು, ನಿರ್ಮಾಣ ಕೆಲಸಕ್ಕೆ ಬಳಸುವ ವಾಹನಗಳನ್ನು ಸಹ ಇನ್ನು ಮುಂದಿನ ದಿನಗಳಲ್ಲಿ ಜೈವಿಕ ಇಂಧನ ಬಳಕೆಯ ವಾಹನಗಳಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ನೂತನ ಅಧಿಸೂಚನೆ ಪ್ರಕಾರ ಡೀಸೆಲ್‌ ಅನ್ನು ಪ್ರಾಥಮಿಕ ಇಂಧನವಾಗಿ ಹಾಗೂ ಸಿಎನ್‌ಜಿ, ಬಯೋ-ಸಿಎನ್‌ಜಿ ಮತ್ತು ಎಲ್‌ಎನ್‌ಜಿ ಇಂಧನವನ್ನು ಸೆಕೆಂಡರಿ ಇಂಧನವನ್ನಾಗಿ ಬಳಸಬಹುದಾಗಿದೆ.

ಹಾಗಾಗಿ, ಟ್ರಾಕ್ಟರ್‌ ಸೇರಿದಂತೆ ಇತರ ವಾಹನಗಳನ್ನು ನೈಸರ್ಗಿಕ ಇಂಧನದ ವಾಹನಗಳಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.