ಬೆಂಗಳೂರು(ಸೆ.08): ಬೆಂಗಳೂರು ರಕ್ಷಿಸುವ ಹೆಸರಲ್ಲಿ ಬಡವರ ಮನೆಗಳನ್ನೆಲ್ಲ, ದಿಢೀರ್ ದಿಢೀರ್ ಅಂತಾ ಹೊಡೆದು ಹಾಕಿದ ಸರ್ಕಾರ, ದೊಡ್ಡವರ ಬಂಗ್ಲೆ, ಹೊಡೆಯಲು ಹಿಂದೇಟು ಹಾಕುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಸರ್ಕಾರಿ ಜಮೀನನನ್ನೇ ಕಬಳಿಸಿ ಒರಾಯನ್ ಮಾಲ್ ಕಟ್ಟಿರುವ ಸುದ್ದಿಯನ್ನು ಸುವರ್ಣ ನ್ಯೂಸ್​ ಪ್ರಸಾರ ಮಾಡಿ, 6 ದಿನ ಆಗಿದೆ. ಆದರೆ ಈ ರಿಪೋರ್ಟ್​ ಸಂಬಂಧಪಟ್ಟವರ ಕೈಗೆ ಸಿಕ್ಕೇ ಇಲ್ವಂತೆ.

ಸನ್ಮಾನ್ಯ ಮುಖ್ಯಮಂತ್ರಿಗಳು ಇಂಥಾದ್ದೊಂದು ಹೇಳಿಕೆ ಕೊಟ್ಟಿದ್ದರು. ಯಾರೇ ಇರಲಿ,ಕ್ರಮ ಕೈಗೊಂಡೇ ಸಿದ್ಧ ಎಂದು ರೋಷಾವೇಷದಿಂದಲೇ ಮಾತನಾಡಿದ್ದರು. ಒತ್ತುವರಿ ತೆರವು ಶುರುವಾದಾಗ ಓವರ್​ಸ್ಪೀಡ್​ನಲ್ಲಿ ಹೋದ ಬಿಬಿಎಂಪಿ, ಇದ್ದಕ್ಕಿದ್ದಂತೆ ಸೈಲೆಂಟ್ ಆಗಿಬಿಟ್ಟಿದೆ. ಅದುವರೆಗೆ ಬಡವರ ಮನೆಗಳನ್ನು ನಿಮಿಷಗಳ ಲೆಕ್ಕದಲ್ಲಿ ಒಡೆದು ಹಾಕಿದ ಬಿಬಿಎಂಪಿ, ದೊಡ್ಡ ದೊಡ್ಡವರ ಬಂಗಲೆ, ಅಪಾರ್ಟ್​​ಮೆಂಟ್, ಶಾಪಿಂಗ್​ಮಾಲ್​ಗಳ ವಿಚಾರ ಬಂದಿದ್ದೇ ತಡ, ಸುಮ್ಮನಾಗಿದ್ದಾರೆ.

ಅದು ಸತ್ಯವಾಗಿದ್ದು ಈ ಒರಾಯನ್ ಮಾಲ್ ವಿಚಾರದಲ್ಲಿ. ಈ ಒರಾಯನ್ ಮಾಲ್, ಹಳ್ಳ, ಸರ್ಕಾರಿ ಕರಾಬು ಭೂಮಿಯನ್ನ ಒತ್ತುವರಿ ಮಾಡಿಕೊಂಡು ಮಾಲ್ ಕಟ್ಟಿದೆ. ಒರಾಯನ್​ನವರು ಮಾಡಿರೋದು ರಾಜಾಕಾಲುವೆ ಒತ್ತುವರಿಯಲ್ಲ, ಸರ್ಕಾರದ ಭೂಮಿಯನ್ನೇ 3 ಎಕರೆ 4 ಗುಂಟೆ ನುಂಗಿ ಇಷ್ಟು ದೊಡ್ಡ ಮಾಲ್ ಕಟ್ಟಲಾಗಿದೆ. ಆ ವರದಿಯನ್ನ ಭೂ ದಾಖಲೆಗಳ ಇಲಾಖೆಯಯೇ ಸಿದ್ಧಪಡಿಸಿ ಕೊಟ್ಟಿದೆ. ಆ ವರದಿ ಕೊಟ್ಟು ವಾರವಾಗಿದೆ.

ಮಾಲ್ ವಿರುದ್ಧ ಕ್ರಮ ಕೈಗೊಳ್ಳೋಕೆ ಬಿಬಿಎಂಪಿ ಕಮಿಷನರ್​ಗೆ ಏನು ಭಯ..? 

ಈ ವರದಿ ಸಿದ್ಧವಾಗಿದ್ದು ಸೆಪ್ಟೆಂಬರ್ 2ನೇ ತಾರೀಕು. ಆ ವರದಿಯನ್ನು ಸುವರ್ಣ ನ್ಯೂಸ್ ದಾಖಲೆ ಸಮೇತ ಬಹಿರಂಗಪಡಿಸಿದ್ದು ಮಾರನೇ ದಿನ. ಸೆಪ್ಟೆಂಬರ್ 3ರಂದು. ಈಗ 6 ದಿನಳಾಗಿವೆ. ಆದರೆ, ಇದುವರೆಗೆ..ಆ ವರದಿಯ ಬಗ್ಗೆ ಬಿಬಿಎಂಪಿ ಕಮಿಷನರ್ ಕ್ರಮ ಕೈಗೊಂಡಿಲ್ಲ. ಈ ವರದಿ ಆಧಾರದ ಮೇಲೆ ಒರಾಯನ್ ಮಾಲ್ ವಿರುದ್ಧ ಕ್ರಮ ಕೈಗೊಳ್ಳೋಕೆ ಆಗೋದಿಲ್ವಂತೆ.

ಜಂಟಿ ನಿರ್ದೇಶಕರು ತಮ್ಮ ಮೇಲಧಿಕಾರಿಯಾದ ಭೂದಾಖಲೆ ಇಲಾಖೆ ಆಯುಕ್ತರಿಗೆ ವರದಿ ಕೊಟ್ಟಿದ್ದಾರೆ. ಇದರ ಒಂದು ಪ್ರತಿ ನಮಗೂ ಕಳಿಸಿದ್ದಾರೆ. ಈ ವರದಿಯಲ್ಲಿ ಗ್ರಾಮ ನಕ್ಷೆಯಲ್ಲಿ ಹಳ್ಳ, ಸರ್ಕಾರಿ ಖರಾಬು ಭೂಮಿ ಇತ್ತು. ಆದ್ರೆ ಸಿಟಿ ಸರ್ವೆಯಲ್ಲಿ ಇಲ್ಲ ಎಂದು ಇದೆ. ಇದರನ್ವಯ ಭೂದಾಖಲೆಗಳ ಇಲಾಖೆ ಆಯುಕ್ತರು ನಿರ್ಧಾರ ಕೈಗೊಂಡು ನಮಗೆ ಸೂಚಿಸಬೇಕು.

ಸಾಮಾನ್ಯ ಜನ, ಮಧ್ಯಮ ವರ್ಗದವರ ಒತ್ತುವರಿಗೆ ಬಿಬಿಎಂಪಿ ಇದೇ ರೀತಿ ನೀತಿ ನಿಯಮ ಪಾಲನೆ ಮಾಡಿತ್ತಾ..? ಶತಮಾನದ ಹಿಂದಿನ ನಕ್ಷೆ ಹಿಡಿದುಕೊಂಡು, ತಾವೇ ಅನುಮತಿ ಕೊಟ್ಟಿದ್ದ ಮನೆಗಳನ್ನು ಒಡೆದು ಹಾಕುವಾಗ ಎಲ್ಲಿಗೆ ಹೋಗಿತ್ತು ಈ ಕಾನೂನು.. ಅದೆಲ್ಲ ಪ್ರಶ್ನೆ ಬಿಡಿ. ಇದೇ ವರದಿ ಒಟ್ಟು ಆರು ವಿಭಾಗಗಳ ಮುಖ್ಯಸ್ಥರ ಕೈಸೇರಿದೆ. ಆದರೆ, ಯಾರೊಬ್ಬರೂ ಕ್ರಮ ಕೈಗೊಂಡಿಲ್ಲ. ಕ್ರಮ ಕೈಗೊಳ್ಳುವ ಸಣ್ಣ ಸುಳಿವನ್ನೂ ಕೊಡ್ತಿಲ್ಲ. ಬಿಬಿಎಂಪಿಯ ಪಶ್ಚಿಮ ವಲಯ ಜಂಟಿ ಆಯುಕ್ತರು ಹಾಗೂ ಬೃಹತ್ ಮಳೆ ನೀರು ಗಾಲುವೆಯ ಮುಖ್ಯ ಇಂಜಿನಿಯರ್​ಗೆ ವರದಿ ಇನ್ನೂ ಸಿಕ್ಕಿಲ್ಲವಂತೆ.

ಹಾಗಾದರೆ, ಒತ್ತುವರಿ ಮಾಡಿದವರುರು ಯಾರೇ ಆಗಿರ್ಲಿ, ಕಟ್ಟಡ ಒಡೆಯುತ್ತೇವೆ ಎಂದು ಘರ್ಜಿಸಿದ್ದ ಸರ್ಕಾರ, ಇದ್ದಕ್ಕಿದ್ದಂತೆ ಸುಮ್ಮನಾಗಿದ್ದೇಕೆ?