ಬೆಂಗಳೂರು (ಜೂ. 29): ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಬಡ್ತಿ ನೀಡುವಂತೆ ಒತ್ತಾಯಿಸಿ ಜು.1 ರಿಂದ ರಾಜ್ಯಾದ್ಯಂತ ತರಗತಿ ಬಹಿಷ್ಕರಿಸಿ ಹೋರಾಟ ನಡೆಸಲು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ನಿರ್ಧರಿಸಿದೆ.

ಹೋರಾಟದ ರೂಪರೇಷೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್‌.ವೈ. ಸೊರಟಿ, ‘ಸಿ’ ಆ್ಯಂಡ್‌ ‘ಆರ್‌’ ನಿಯಮಾವಳಿಯಲ್ಲಿ 2017 ರ ನಂತರ ನೇಮಕಗೊಂಡ ಪದವೀಧರ ಪ್ರಾಥಮಿಕ ಶಿಕ್ಷಕರು ಮಾತ್ರ 6ರಿಂದ 8ನೇ ತರಗತಿಗೆ ಬೋಧಿಸಬೇಕು.

2014ಕ್ಕೂ ಹಿಂದೆ ನೇಮಕಗೊಂಡವರು 1 ರಿಂದ 5ನೇ ತರಗತಿಯವರೆಗೆ ಮಾತ್ರ ಬೋಧನೆ ಮಾಡಬೇಕೆಂದು ತಿದ್ದುಪಡಿ ಮಾಡಲಾಗಿದೆ. ಹೀಗಾಗಿ 2014ಕ್ಕಿಂತ ಮೊದಲು ನೇಮಕವಾದ ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಶಾಲಾ ವೃಂದದಿಂದ ಮೂಲವೃಂದಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಜು.1ರಿಂದ 6ರಿಂದ 8ನೇ ತರಗತಿಗಳನ್ನು ಬಹಿಷ್ಕರಿಸಲಾಗುವುದು ಎಂದರು.

ರಾಜ್ಯದಲ್ಲಿ ಒಟ್ಟು 82 ಸಾವಿರ ಶಿಕ್ಷಕರು ಪದವಿ ಹಾಗೂ ಉನ್ನತ ಪದವಿಗಳನ್ನು ಹೊಂದಿದ್ದಾರೆ. ಕಳೆದ 14 ವರ್ಷಗಳಿಂದ 6ರಿಂದ 8ನೇ ತರಗತಿವರೆಗೆ ವಿಷಯವಾರು ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಕರಿಗೆ ಬಡ್ತಿ ನೀಡುವ ಬದಲಾಗಿ 6ರಿಂದ 8ನೇ ತರಗತಿಗೆ ಹೊಸದಾಗಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಸರ್ಕಾರದ ನೂತನ ನಿಯಮದಿಂದ ಕಳೆದ 10ರಿಂದ 15 ವರ್ಷಗಳಿಂದ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಅನುಭವ ಹಾಗೂ ಅರ್ಹತೆ ಇರುವವರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ನಮಗೆ ಬಡ್ತಿ ನೀಡುವ ಬದಲು ಹಿಂಬಡ್ತಿ ನೀಡುತ್ತಿರುವುದು ಸರಿಯಲ್ಲ. ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಪದವೀಧರರಾಗಿರುವ ಶಿಕ್ಷಕರಿಗೆ ಬಡ್ತಿ ನೀಡಬೇಕು. ಮೂಲ ವೃಂದದ ಶಿಕ್ಷಕರನ್ನು ಈ ಮೊದಲು ಇದ್ದಂತೆ ಮುಂದುವರಿಸಬೇಕು. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು. ನಮ್ಮ ಬೇಡಿಕೆ ಈಡೇರುವವರೆಗೂ 6ರಿಂದ 8ನೇ ತರಗತಿ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.