ಮಹಿಳಾ ಪ್ರಯಾಣಿಕರ ಮೇಲಿನ ದೌರ್ಜನ್ಯ ತಡೆಗಟ್ಟಲು ಕ್ಯಾಬ್‌ಗಳಲ್ಲಿ ಸೇಫ್ಟಿ ಲಾಕ್ ಇರಲ್ಲ ! ಚೈಲ್ಡ್‌ ಸೇಫ್ಟಿ ಲಾಕ್‌ ವ್ಯವಸ್ಥೆ  ನಿಷ್ಕ್ರಿಯಗೊಳಿಸುವ ಸಂಬಂಧ ತಿದ್ದುಪಡಿ ನಿಯಮ ರೂಪಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ 

ಬೆಂಗಳೂರು (ಅ. 12):  ಮಹಿಳಾ ಪ್ರಯಾಣಿಕರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ಯಾಬ್‌ಗಳಲ್ಲಿನ ಚೈಲ್ಡ್‌ ಸೇಫ್ಟಿಲಾಕ್‌ ವ್ಯವಸ್ಥೆ ನಿಷ್ಕಿ್ರಯಗೊಳಿಸುವ ಸಂಬಂಧ ತಿದ್ದುಪಡಿ ನಿಯಮ ರೂಪಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿದೆ.

ಆ್ಯಪ್‌ ಆಧಾರಿತ ಕ್ಯಾಬ್‌ಗಳಲ್ಲಿನ ಮಹಿಳಾ ಪ್ರಯಾಣಿಕರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಹೆಚ್ಚಾಗುತ್ತಿವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ಯಾಬ್‌ಗಳಲ್ಲಿನ ಚೈಲ್ಡ್‌ ಸೇಫ್ಟಿಲಾಕ್‌ ವ್ಯವಸ್ಥೆ ನಿಷ್ಕಿ್ರಯಗೊಳಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಬೆಂಗಳೂರು ಪ್ರಸೂತಿ ಮತ್ತು ಸ್ತ್ರೀರೋಗ ಸೊಸೈಟಿ (ಬಿಎಸ್‌ಒಜಿ) ಹೈಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಅವರಿದ್ದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಿ, ಚೈಲ್ಡ್‌ ಸೇಫ್ಟಿಲಾಕ್‌ ನಿಷ್ಕಿ್ರಯಗೊಳಿಸುವ ಕುರಿತು ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ ನಿಯಮಕ್ಕೆ ತಿದ್ದುಪಡಿ ತಂದು ಅ.9ರಂದು ಕರಡು ಅಧಿಸೂಚನೆ ಹೊರಡಿಸಲಾಗಿದೆ.

ಆ ಕರಡು ಅಧಿಸೂಚನೆಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ತದನಂತರ ಸಲ್ಲಿಕೆಯಾದ ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹೊಸ ನಿಯಮ ಜಾರಿಗೊಳಿಸುವ ವಿಧಾನವೇನು? ಅದಕ್ಕಾಗಿ ಯಾವ ಯೋಜನೆ ರೂಪಿಸಲಾಗಿದೆ? ಈಗಾಗಲೇ ಸಂಚರಿಸುತ್ತಿರುವ ಚೈಲ್ಡ್‌ ಲಾಕ್‌ ವ್ಯವಸ್ಥೆ ಹೊಂದಿರುವ ವಾಹನಗಳ ನಿಯಂತ್ರಣಕ್ಕೆ ಏನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನಿಸಿತು. ನಂತರ ಈ ಕುರಿತು ಮುಂದಿನ ವಿಚಾರಣೆ ವೇಳೆ ಹೆಚ್ಚಿನ ಮಾಹಿತಿ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಒಂದು ತಿಂಗಳು ಮುಂದೂಡಿತು.

ಆಕ್ಷೇಪಕ್ಕೆ 30 ದಿನ ಕಾಲಾವಕಾಶ

‘ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ-1988ರ ಕಲಂ2(25)ರಲ್ಲಿ ವ್ಯಾಖ್ಯಾನಿಸಿರುವ ಸಾರಿಗೆ ವಾಹನ ವರ್ಗದ ಮೋಟಾರ್‌ ಕ್ಯಾಬ್ಸ್‌ (ಟ್ಯಾಕ್ಸಿ) ವಾಹನಗಳಲ್ಲಿ ಚೈಲ್ಡ್‌ ಸೇಫ್ಟಿಲಾಕ್‌ ವ್ಯವಸ್ಥೆಯನ್ನು ನಿಷ್ಕಿ್ರೕಯಗೊಳಿಸಬೇಕು. ತಪ್ಪಿದ್ದಲ್ಲಿ ಅಂತಹ ವಾಹನಗಳ ರಹದಾರಿ ನೀಡುವ/ ನವೀಕರಿಸುವ ಮತ್ತು ಅರ್ಹತಾ ಪತ್ರ ನೀಡುವ/ ನವೀಕರಣ ಮಂಜೂರು ಮಾಡುವಂತಿಲ್ಲ. ಈ ಬಗ್ಗೆ ಸಂಬಂಧಿಸಿದವರು ಆಕ್ಷೇಪಣೆಗಳನ್ನು ಸಲ್ಲಿಸಲು 30 ದಿನ ಕಾಲಾವಕಾಶ ನೀಡಲಾಗಿದೆ’ ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.