ಬಡವರ ಮನೆ ಅಡಿಪಾಯಕ್ಕೂ ಸರ್ಕಾರದಿಂದ ಹಣ: ಖಾದರ್‌

Government new scheme to BPL Card holders
Highlights

ಮನೆಯ ಅಡಿಪಾಯ ನಿರ್ಮಾಣ ಮಾಡುವ ಚೈತನ್ಯವನ್ನು ಹೊಂದಿಲ್ಲದ ಬಡವರಿಗೆ ಸಹಕಾರ ಸಂಘಗಳ ಮೂಲಕ ಹಣಕಾಸಿನ ನೆರವು ನೀಡಲು ಸರ್ಕಾರ ಚಿಂತನೆ ನಡೆಸಿದೆ. ಈಗಿರುವ ನಿಯಮದ ಪ್ರಕಾರ ಫಲಾನುಭವಿ ಮನೆಯ ಅಡಿಪಾಯ ಹಾಕಿಕೊಂಡ ನಂತರವೇ ಮನೆ ಕಟ್ಟಲು ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಆದರೆ ಅನೇಕ ಬಡವರಿಗೆ ಅಡಿಪಾಯ ಹಾಕುವಷ್ಟುಸಾಮರ್ಥ್ಯ ಇಲ್ಲದಿರುವ ಹಿನ್ನೆಲೆಯಲ್ಲಿ ನೆರವಾಗುವ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದು ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆ ಸಚಿವ ಯು.ಟಿ. ಖಾದರ್‌ ತಿಳಿಸಿದರು.

ಬೆಂಗಳೂರು (ಜೂ. 13):  ಮನೆಯ ಅಡಿಪಾಯ ನಿರ್ಮಾಣ ಮಾಡುವ ಚೈತನ್ಯವನ್ನು ಹೊಂದಿಲ್ಲದ ಬಡವರಿಗೆ ಸಹಕಾರ ಸಂಘಗಳ ಮೂಲಕ ಹಣಕಾಸಿನ ನೆರವು ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಈಗಿರುವ ನಿಯಮದ ಪ್ರಕಾರ ಫಲಾನುಭವಿ ಮನೆಯ ಅಡಿಪಾಯ ಹಾಕಿಕೊಂಡ ನಂತರವೇ ಮನೆ ಕಟ್ಟಲು ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಆದರೆ ಅನೇಕ ಬಡವರಿಗೆ ಅಡಿಪಾಯ ಹಾಕುವಷ್ಟುಸಾಮರ್ಥ್ಯ ಇಲ್ಲದಿರುವ ಹಿನ್ನೆಲೆಯಲ್ಲಿ ನೆರವಾಗುವ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದು ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆ ಸಚಿವ ಯು.ಟಿ. ಖಾದರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ಯೋಜನೆಗೆ ಆಯ್ಕೆಯಾದ ಫಲಾನುಭವಿಗೆ ಮನೆಯ ಅಡಿಪಾಯ ಹಾಕಲು ಸಹ ಶಕ್ತಿ ಇಲ್ಲದಿದ್ದರೆ ಹಣಕಾಸಿನ ನೆರವು ನೀಡುವ ಸಂಬಂಧ ಸಹಕಾರ ಸಂಘಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಚಿಂತನೆ ಮಾಡಲಾಗುತ್ತಿದೆ. ಸಹಕಾರ ಸಂಘಗಳು ಫಲಾನುಭವಿಗೆ ನೀಡುವ ಹಣವನ್ನು ಸರ್ಕಾರ ಸಂಘಗಳಿಗೆ ನೇರವಾಗಿ ಪಾವತಿ ಮಾಡಲಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಮನೆ ವಿತರಿಸಲು ಅನೇಕ ಸಮಸ್ಯೆಗಳು ಇವೆ. ಫಲಾನುಭವಿ ಆಯ್ಕೆಯಾದ ಮೇಲೆ ಮನೆ ವಿತರಿಸಲು ತಡ ಮಾಡಬಾರದು, ಫಲಾನುಭವಿಯ ಫೋಟೊ ಅಪ್‌ಲೋಡ್‌ ಆದಮೇಲೆ ಒಂದು ವಾರದೊಳಗೆ ಅವನ ಖಾತೆಗೆ ಹಣ ಜಮಾ ಆಗಬೇಕು ಎಂಬ ಉದ್ದೇಶ ಹೊಂದಲಾಗಿದೆ. ಹಿಂದಿನ ಸರ್ಕಾರ ಒಟ್ಟು 11 ಲಕ್ಷ ಮನೆ ನೀಡುವ ಗುರಿ ಹೊಂದಿತ್ತು. ಈ ಪೈಕಿ ಎಂಟು ಲಕ್ಷ ಮನೆ ನೀಡಲಾಗಿದೆ. ಬಾಕಿ ಮನೆಗಳನ್ನು ಸಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಹೇಳಿದರು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ:

ಸದ್ಯ ಬೆಂಗಳೂರಿನಲ್ಲಿ ಮಾತ್ರ ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ಮನೆ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಪದ್ಧತಿ ಜಾರಿ ಇದೆ. ಈ ಪದ್ಧತಿಯನ್ನು ಮಂಗಳೂರು, ಮೈಸೂರು ಮುಂತಾದ ನಗರ ಪ್ರದೇಶಗಳಿಗೂ ವಿಸ್ತರಿಸಲು ಚಿಂತನೆ ಮಾಡಲಾಗಿದೆ. ಕರ್ನಾಟಕ ಗೃಹ ಮಂಡಳಿ ಸದ್ಯ ನೆಲಮಹಡಿ ಸೇರಿ ಮೂರು ಅಥವಾ ನಾಲ್ಕು ಅಂತಸ್ತಿನ ಮನೆಗಳನ್ನು ಮಾತ್ರ ನಿರ್ಮಾಣ ಮಾಡುತ್ತಿದೆ. ಆದರೆ ಕೆಎಚ್‌ಬಿ ಸಮೀಪದಲ್ಲೆ ಖಾಸಗಿಯವರು 13-14 ಅಂತಸ್ತಿನ ಮನೆಗಳನ್ನು ಕಟ್ಟುತ್ತಾರೆ. ಹೀಗಾಗಿ ಖಾಸಗಿಯವರಿಗೆ ಪೈಪೋಟಿ ನೀಡಲು ಕೆಎಚ್‌ಬಿ ಸಹ 13, 14 ಅಂತಸ್ತಿನ ಮನೆ ನಿರ್ಮಿಸಲು ಚಿಂತನೆ ಮಾಡುತ್ತಿದೆ ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದರು.

ನಗರಾಭಿವೃದ್ಧಿ ಇಲಾಖೆಯಲ್ಲಿ ಇ-ಆಡಳಿತ:

ನಗರಾಭಿವೃದ್ಧಿ ಇಲಾಖೆಯಲ್ಲಿ ಇ-ಆಡಳಿತ ವ್ಯವಸ್ಥೆ ಜಾರಿ ಮಾಡಲಾಗುವುದು. ಈ ವ್ಯವಸ್ಥೆಯಿಂದ ಇಲಾಖೆ ಶೇ.60ರಷ್ಟುವ್ಯವಹಾರ ಸರಿದಾರಿಗೆ ಬರಲಿದೆ. ಸ್ಮಾರ್ಟ್‌ ಸಿಟಿ ಯೋಜನೆ ಜಾರಿ ನಾನಾ ಕಾರಣಗಳಿಂದ ಕೊಂಚ ವಿಳಂಬ ಆಗಿರುವುದು ನಿಜ, ಈ ಯೋಜನೆ ತ್ವರಿತವಾಗಿ ಅನುಷ್ಠಾನಗೊಳ್ಳಲು ಪ್ರತ್ಯೇಕ ಅಧಿಕಾರಿಯನ್ನು ನೇಮಕ ಮಾಡಲು ಚಿಂತಿಸಲಾಗುತ್ತಿದೆ. ಜತೆಗೆ ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಯೋಜನೆಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಯು.ಟಿ. ಖಾದರ್‌ ತಿಳಿಸಿದರು.

loader