ಬೆಂಗಳೂರು (ಸೆ. 25): ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಪೌಷ್ಟಿಕಾಂಶ ಯುಕ್ತ ಹಾಲು ಸೇವಿಸುತ್ತಿರುವ ಮಕ್ಕಳು ಇನ್ಮುಂದೆ ಜೇನುತುಪ್ಪದ ಸಿಹಿಯನ್ನು ಅನುಭವಿಸಲಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಮತ್ತು ಹಾಲು ವಿತರಿಸುತ್ತಿದೆ. ಇದರ ಜತೆಗೆ ಪೌಷ್ಟಿಕಾಂಶಯುಕ್ತ ‘ಜೇನುತುಪ್ಪ’ ವಿತರಿಸು ವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ (ಎಂಎಚ್‌ಆರ್‌ಡಿ) ನಿರ್ದೇಶನ ನೀಡಿದೆ. ಜೇನಿನಲ್ಲಿ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟುವ ಶಕ್ತಿ ಇದೆ. ಆ್ಯಂಟಿ ಬಯೋಟಿಕ್ ಗುಣಗಳನ್ನು ಹೊಂದಿದೆ.

ಕೆಮ್ಮು, ಗಂಟಲು ಕೆರೆತ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಗುಣ ವಿದೆ. ಜೇನು ಸೇವನೆಯಿಂದ ವಿದ್ಯಾರ್ಥಿಗಳಲ್ಲಿ ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯಲು ಸಹಕಾರಿಯಾಗಲಿದೆ. ಕೊಬ್ಬಿನಂತಹ ಅಂಶಗಳು ಕರಗಲಿವೆ. ಜೇನಿನಲ್ಲಿ
ಪೌಷ್ಟಿಕಾಂಶಗಳು, ಶರ್ಕರ ಪಿಷ್ಟಗಳು, ನಾರು, ಸೋಡಿಯಂ, ಪೊಟ್ಯಾಸಿಯಂ, ವಿಟಮಿನ್ ಸಿ, ವಿಟಮಿನ್ ಬಿ ೬, ಕಬ್ಬಿಣ, ಮೆಗ್ನೀ ಷಿಯಂ, ರಂಜಕ, ಸತು, ಕ್ಯಾಲ್ಸಿಯಂ ಅಂಶಗಳಿವೆ.

ಶರ್ಕರ ಪಿಷ್ಟಗಳಲ್ಲಿ ಗ್ಲೂಕೋಸ್‌ಗಿಂತ ಹೆಚ್ಚಿನ ಸಿಹಿಯಾದ ಅಂಶಗಳಿರುತ್ತವೆ. ಪ್ರತಿ ದಿನ ಜೇನು ಸೇವನೆಯಿಂದ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು ಉತ್ಪತ್ತಿಯಾಗಲಿವೆ. ಈ ಬಗ್ಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ಕೈಗೊಂಡಿರುವ ಸಂಶೋಧನೆಯ ಪ್ರಕಾರ ಜೇನಿನಲ್ಲಿ 600 ಬಗೆಯ ಅಂಶಗಳು ಕಂಡು ಬರಲಿವೆ ಎಂದು ಅಂದಾಜಿಸಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆಯೂ ಯೋಜನೆಯನ್ನು ಪ್ರಸ್ತುತಪಡಿಸಿದೆ. ಜೇನುತುಪ್ಪದಲ್ಲಿರುವ ಪೌಷ್ಟಿಕಾಂಶದ ಮೌಲ್ಯಗಳನ್ನು ಅರಿತ ಪ್ರಧಾನಿ ಮೋದಿ ಅವರು ಮಧ್ಯಾಹ್ನದ ಬಿಸಿಯೂಟದ ಭಾಗವಾಗಿ ಜೇನು ಬಳಸುವಂತೆ ಶಿಫಾರಸು ಮಾಡಿದ್ದಾರೆ.  

-ಎನ್. ಎಲ್ ಶಿವಮಾದು