ದೇಶದ ಭದ್ರತೆ ಹಾಗೂ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಒಂದು ದಿನದ ಮಟ್ಟಿಗೆ ಎನ್'ಡಿಟಿವಿ ಹಿಂದಿ ಆವೃತ್ತಿ ಮೇಲೆ ನಿರ್ಬಂಧ ಹೇರುವ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ಹಾಗೂ ಪ್ರಸಾರಖಾತೆ ಸಚಿವ ಎಂ. ವೆಂಕಯ್ಯಾ ನಾಯ್ಡು ಹೇಳಿದ್ದಾರೆ.
ನವದೆಹಲಿ(ನ.05): ಒಂದು ದಿನದ ಮಟ್ಟಿಗೆ ಎನ್'ಡಿಟಿವಿ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವ ಕ್ರಮಕ್ಕೆ ದೇಶದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ, ದೇಶದ ಹಿತಾದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ದೇಶದ ಭದ್ರತೆ ಹಾಗೂ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಒಂದು ದಿನದ ಮಟ್ಟಿಗೆ ಎನ್'ಡಿಟಿವಿ ಹಿಂದಿ ಆವೃತ್ತಿ ಮೇಲೆ ನಿರ್ಬಂಧ ಹೇರುವ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ಹಾಗೂ ಪ್ರಸಾರಖಾತೆ ಸಚಿವ ಎಂ. ವೆಂಕಯ್ಯಾ ನಾಯ್ಡು ಹೇಳಿದ್ದಾರೆ.
ಎನ್'ಡಿಟಿವಿ ಹಿಂದಿ ಚಾನೆಲ್ ಜನವರಿಯಲ್ಲಿ ಪಠಾಣ್ ಕೋಟ್ ಮೇಲಿನ ಉಗ್ರರ ದಾಳಿ ಬಗ್ಗೆ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ವರದಿ ಮಾಡಿದೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಪ್ರಸಾರ ಮಾಡುವುದರಿಂದ ಭವಿಷ್ಯದಲ್ಲಿ ಉಗ್ರರು ಇನ್ನಷ್ಟು ದಾಳಿ ನಡೆಸಬಹುದು ಎಂಬ ಶಿಫಾರಸು ಆಧರಿಸಿ ಕೇಂದ್ರ ಸರ್ಕಾರ ಈ ಚಾನಲ್ ಮೇಲೆ ನವೆಂಬರ್ 9ರಂದು ಒಂದು ದಿನದ ಮಟ್ಟಿಗೆ ನಿಷೇಧ ಹೇರಿದೆ.
ಎನ್'ಡಿಟಿವಿ(ಹಿಂದಿ ಆವೃತ್ತಿ) ಪ್ರಸಾರಕ್ಕೆ ಒಂದು ದಿನದ ನಿರ್ಬಂಧ ಹೇರಿರುವುದನ್ನು ಭಾರತೀಯ ಸಂಪಾದಕರ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ಇದಲ್ಲದೇ ತಕ್ಷಣ ಕೇಂದ್ರ ಸರ್ಕಾರ ನಿರ್ಬಂಧ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ. ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.