ಬೆಂಗಳೂರು (ಜು. 17): ರಾಜ್ಯದ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು ಗ್ರಾಹಕರಿಗೆ ಹೊರಗಿನ ಆಹಾರ ಒಯ್ಯಲು ಅವಕಾಶ ನೀಡದೆ ದುಬಾರಿ ಬೆಲೆಯಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ  ಸುಲಿಯುತ್ತಿರುವುದು ಒಂದೆಡೆಯಾದರೆ, ದುಬಾರಿ ಟಿಕೆಟ್ ದರ ವಿಧಿಸುವ ಮೂಲಕವೂ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ.

ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಅಲ್ಲಿನ ಸರ್ಕಾರಗಳು ಮಲ್ಟಿಪ್ಲೆಕ್ಸ್’ಗಳಲ್ಲಿ ದರ ನಿಯಂತ್ರಣಕ್ಕೆ ಕಾನೂನು ರೂಪಿಸಿವೆ. ರಾಜ್ಯಗಳಲ್ಲಿ  ಜನಸಾಮಾನ್ಯರೂ ಕೈಗೆಟಕುವ ದರದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ವೀಕ್ಷಿಸಲು ಅನುವಾಗಿದೆ. ಆದರೆ, ರಾಜ್ಯದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ.

2017-18 ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ದರ ನಿಗದಿಗೊಳಿಸುವ ಘೋಷಣೆ ಮಾಡಿದ್ದರು. ಈ ಸಂಬಂಧ ಹೊರಡಿಸಲಾದ ಆದೇಶದ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಕೂಡಲೇ ಹೈಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಆದರೆ, ಕೋರ್ಟ್‌ನಲ್ಲಿ ಪ್ರಬಲ ವಾದ ಮಂಡಿಸಿ ಈ ತಡೆಯಾಜ್ಞೆ ತೆರವುಗೊಳಿಸಲು ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯ ಮಲ್ಟಿಪ್ಲೆಕ್ಸ್‌ಗಳಲ್ಲಿ ಗ್ರಾಹಕರಿಂದ ದುಬಾರಿ ಟಿಕೆಟ್ ದರ ವಸೂಲಿ ಮಾಡಲಾಗುತ್ತಿದೆ. ಅದರಲ್ಲೂ ವಾರಾಂತ್ಯ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಏಕಾಏಕಿ ಟಿಕೆಟ್ ದರ ಏರಿಕೆ ಮಾಡುತ್ತಿವೆ.
ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಏಕರೂಪ ದರ ವಿಧಿಸಿ, ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಿದ್ದರೆ, ಕರ್ನಾಟಕದಲ್ಲಿ ಮಾತ್ರ ಏಕೆ ಸಾಧ್ಯವಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.  ಸರ್ಕಾರ ಕೂಡ ಏಕರೂಪ ದರ ನಿಗದಿಯಿಂದ ಸಾರ್ವಜನಿಕರಿಗೆ ಆಗುವ ಒಳಿತಿನ ಬಗ್ಗೆ ಹೈಕೋರ್ಟ್‌ಗೆ ಮನದಟ್ಟು ಮಾಡುವಲ್ಲಿ ಎಲ್ಲೋ ಒಂದು ಕಡೆ ವೈಫಲ್ಯ ಆಗಿದೆ ಎಂಬುದು ಸಾರ್ವಜನಿಕರಲ್ಲಿನ ಭಾವನೆ.

ತಡೆಯಾಜ್ಞೆಯಿಂದ ಏಕರೂಪ ದರ ಜಾರಿ ಇಲ್ಲ

2017-18 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ ಮಲ್ಟಿಫ್ಲೆಕ್ಸ್‌ಗಳಲ್ಲಿ ಏಕರೂಪ ದರ ನಿಗದಿ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ ಆದೇಶಕ್ಕೆ ಹೈಕೋರ್ಟ್ ನೀಡಿದ ತಡೆಯಾಜ್ಞೆ ನೀಡಿದೆ. ತೆರವಿಗೆ ಸಂಬಂಧಿಸಿದಂತೆ ಸರ್ಕಾರದ ಅಡ್ವೋಕೇಟ್ ಜನರಲ್ ಹೈಕೋರ್ಟ್‌ಗೆ ಹಲವು ಬಾರಿ ಪತ್ರ ಬರೆದಿದ್ದಾರೆ. ಆದರೆ, ಹೈಕೋರ್ಟ್ ಇದುವರೆಗೂ ತಡೆಯಾಜ್ಞೆ ತೆರವುಗೊಳಿಸಿಲ್ಲ. ಈ ತಡೆಯಾಜ್ಞೆ ತೆರವುಗೊಳ್ಳುವವರೆಗೂ ಏಕರೂಪದ ದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಪಿ.ಎಸ್. ಹರ್ಷ ತಿಳಿಸಿದರು.

ನಿಯಮದ ಪ್ರಕಾರವೇ ಅವಕಾಶ:

ಕಳೆದ ಮಾರ್ಚ್‌ನಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ತಂಪುಪಾನೀಯ ಹಾಗೂ ಆಧಾರ ಪದಾರ್ಥಗಳ ದುಬಾರಿ ದರದ ಬಗ್ಗೆ ಚರ್ಚೆ ನಡೆದಿತ್ತು. ಅಂದಿನ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ್ ಖಂಡ್ರೆ ಅವರು ಉತ್ತರಿಸುತ್ತಾ, ಮಲ್ಟಿಪ್ಲೆಕ್ಸ್‌ಗಳಲ್ಲಿ ತಂಪುಪಾನೀಯ ಮಾರಾಟ ರದ್ದುಗೊಳಿಸಲು ಸಾಧ್ಯವಿಲ್ಲ. ಏಕೆಂದರೆ, ಮಲ್ಟಿಪ್ಲೆಕ್ಸ್ ಹಾಗೂ ಚಲನಚಿತ್ರ ಮಂದಿರಗಳಲ್ಲಿ ತಂಪುಪಾನೀಯ ಹಾಗೂ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಆಯಾಯ ಮಹಾನಗರ ಪಾಲಿಕೆ ಹಾಗೂ ನಗರ ಪಾಲಿಕೆ ಅನುಮತಿ ನೀಡಿರುತ್ತವೆ. ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ ಪ್ರಕಾರವೇ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದರು. ಇದು ಸರ್ಕಾರವೇ ಮಲ್ಟಿಪ್ಲೆಕ್ಸ್‌ಗಳಿಗೆ ದೊಣ್ಣೆ ಕೊಟ್ಟು ಗ್ರಾಹಕರಿಗೆ ಹೊಡೆಸುತ್ತಿರುವುದಕ್ಕೆ ನಿದರ್ಶನ.

-ಮೋಹನ್ ಹಂಡ್ರಂಗಿ/ ವಿಶ್ವನಾಥ್ ಮಲೆಬೆನ್ನೂರು