Asianet Suvarna News Asianet Suvarna News

ಅನ್ನದಾತ ಸುಖೀಭವ; ರೈತರಿಗಾಗಿ ಬರಲಿದೆ ಹೊಸ ಯೋಜನೆಗಳು

ರಾಜ್ಯ ಸರ್ಕಾರ ಟೇಕಾಫ್‌ ಆಗುವ ಯಾವುದೇ ಲಕ್ಷಣಗಳು ರಾಜ್ಯಪಾಲರ ಭಾಷಣದಲ್ಲಿ ಕಾಣುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿರುವ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಕಂಡುಬರುತ್ತಿಲ್ಲ. ರೈತರ ಸಾಲಮನ್ನಾ ಸೇರಿದಂತೆ ರೈತರ ಸಮಸ್ಯೆಗಳ ಬಗ್ಗೆ ಉಲ್ಲೇಖ ಇಲ್ಲ. ನೀರಾವರಿ ವಿಚಾರದಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಪ್ರಸ್ತಾಪ ಇಲ್ಲ. ರಾಜ್ಯಪಾಲರ ಭಾಷಣ ಕಾಟಾಚಾರಕ್ಕೆ ಮಾಡಿಸಿದಂತಿದೆ. ಸರ್ಕಾರದ ಮುಂದಿನ ನಡೆ ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲ ಎಂದು ಬಿಎಸ್’ವೈ ಹೇಳಿದ್ದಾರೆ. 
 

Governer Vajubhai Vala assures to launch new scheme for farmers

ಬೆಂಗಳೂರು (ಜೂ. 03):  ರೈತನ ಬಾಳಿನಲ್ಲಿ ಬೆಳಕು ತಂದು ಆತನ ಬದುಕಿನಲ್ಲಿ ಸಂತೃಪ್ತಿ ತರಲು ಸರ್ಕಾರ ಶೀಘ್ರದಲ್ಲಿಯೇ ಹೊಸ ಯೋಜನೆಗಳನ್ನು ರೂಪಿಸಲಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಪ್ರಕಟಿಸಿದ್ದಾರೆ.

ಅಲ್ಲದೆ, ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗಬಾರದು ಎಂಬುದಾಗಿ ಈ ಸದನದ ಮೂಲಕ ರೈತ ಸಮುದಾಯಕ್ಕೆ ಮನವಿ ಮಾಡುತ್ತೇನೆ ಎಂದೂ ಅವರು ಹೇಳಿದ್ದಾರೆ.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸೋಮವಾರ ವಿಧಾನಮಂಡಲದ ಮೊದಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು ಹೊಸ ಸರ್ಕಾರದ ಧ್ಯೇಯೋದ್ದೇಶಗಳನ್ನು ಹಾಗೂ ಆಶಯಗಳನ್ನು ಸೂಚ್ಯವಾಗಿ ವಿವರಿಸಿದರು. ವಿಶೇಷವಾಗಿ ರೈತ ಸಮುದಾಯದ ಬಗ್ಗೆ ಹೆಚ್ಚು ಪ್ರಸ್ತಾಪಿಸಿದ್ದು ಗಮನಾರ್ಹವಾಗಿತ್ತು. ರೈತರ ಬದುಕಿನಲ್ಲಿ ಸಂತೃಪ್ತಿ ತರಲು ಶೀಘ್ರ ಹೊಸ ಯೋಜನೆಗಳ ಜಾರಿ ಎನ್ನುವ ಮೂಲಕ ಸಾಲಮನ್ನಾ ಬಗ್ಗೆಯೂ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ಅನ್ನದಾತನ ಬದುಕನ್ನು ಹಸನುಗೊಳಿಸಲು ನಮ್ಮ ಸರ್ಕಾರವು ಮಾನವೀಯತೆಯ ಚೌಕಟ್ಟಿನಲ್ಲಿ ನಿಲುವು ನಿರ್ಧಾರಗಳನ್ನು ಕೈಗೊಳ್ಳಲಿದೆ. ರೈತರು ನಮ್ಮ ನಾಡಿನ ಬೆನ್ನಲುಬು. ರೈತನ ರಕ್ಷಣೆಗೆ ಸರ್ಕಾರ ಸದಾ ಚಿಂತಿಸುತ್ತದೆ. ರೈತನನ್ನು ಆಧುನಿಕ ಕೃಷಿ ತಂತ್ರಜ್ಞಾನ ಬಳಕೆಗೆ ಸಜ್ಜುಗೊಳಿಸುವುದು ಆದ್ಯತೆಗಳಲ್ಲಿ ಪ್ರಮುಖವಾದದ್ದು ಎಂದು ಹೇಳಿದರು.

ಹೊಸ ಸರ್ಕಾರವು ಈ ಹಿಂದಿನ ಪರಿಣಾಮಕಾರಿ ಯೋಜನೆಗಳ ಜೊತೆಗೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ನಾಗರಿಕನ ಹಿತ ಕಾಪಾಡುವಂಥ ಹೊಸ ದೃಷ್ಟಿ-ಹೊಸ ದಾರಿಯಲ್ಲಿ ಹೆಜ್ಜೆ ಇಡಲಿದೆ ಎಂದು ರಾಜ್ಯಪಾಲರು ಸ್ಪಷ್ಟವಾಗಿ ಹೇಳುವ ಮೂಲಕ ಈ ಸಂಬಂಧ ಉದ್ಭವಿಸಿದ್ದ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಸದಾ ಮಳೆಯನ್ನೇ ಅವಲಂಬಿಸುವ ರೈತ ನೀರು ಲಭ್ಯತೆಯನ್ನು ಆಧರಿಸಿ ಬೆಳೆ ಬೆಳೆಯಲು ಮುಂದಾಗಬೇಕು. ಅತಿವೃಷ್ಟಿಯಲ್ಲಿ ಬೆಳೆಹಾನಿ, ಅನಾವೃಷ್ಟಿಯಲ್ಲಿ ಬೆಳೆ ನಷ್ಟ, ಸಮವೃಷ್ಟಿಯಲ್ಲಿ ಬೆಳೆದ ಬೆಳೆಗೆ ದೊರೆಯದ ನ್ಯಾಯಯುತ ಬೆಲೆ. ಇದು ರೈತನ ಪರಿಸ್ಥಿತಿಯಾಗಿದೆ. ಹೀಗಾಗಿ, ರೈತನ ಬಾಳಿನಲ್ಲಿ ಬೆಳಕು ತಂದು ಆತನ ಬದುಕಿನಲ್ಲಿ ಸಂತೃಪ್ತಿ ತರಲು ಸರ್ಕಾರ ಶೀಘ್ರದಲ್ಲಿಯೇ ಹೊಸ ಯೋಜನೆಗಳನ್ನು ರೂಪಿಸಲಿದೆ ಎಂದು ತಿಳಿಸಿದರು.

ರಾಜ್ಯದ ರೈತರು ಇಸ್ರೇಲ್‌ ಮಾದರಿಯ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂಬುದು ಸರ್ಕಾರದ ಬಯಕೆ. ನೀರು ಲಭ್ಯತೆ ಆಧರಿಸಿ ಯಾವ ಋುತುಮಾನಕ್ಕೆ ಯಾವ ಬೆಳೆ ಬೆಳೆಯಬಹುದು ಎಂಬುದರ ಕುರಿತು ಸರ್ಕಾರದ ಅಧಿಕಾರಿಗಳು ರೈತರ ಜಮೀನಿಗೆ ಬಂದು ಸಲಹೆ ನೀಡುತ್ತಾರೆ. ನಾವು ನಮ್ಮ ಕೃಷಿ ಪದ್ಧತಿ ಹಾಗೂ ಕೃಷಿ ನೀತಿಯಲ್ಲಿ ಬದಲಾವಣೆಗಳನ್ನು ತರಬೇಕಾಗಿದೆ. ಅನ್ನದಾತನಿಗೆ ಅಧಿಕ ಆದಾಯ ಮತ್ತು ಹೆಚ್ಚು ಲಾಭ ದೊರಕಿಸಿಕೊಡಬೇಕಾದರೆ ತೋಟಗಾರಿಕಾ ಬೆಳೆಗಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ರಫ್ತು ಆಧಾರಿತ ದೃಷ್ಟಿಹೊತ್ತು ಮಾರುಕಟ್ಟೆ, ಪೊಟ್ಟಣೀಕರಣ ಹಾಗೂ ಸಂಗ್ರಹಣಾ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ ಎಂದು ರಾಜ್ಯಪಾಲರು ಹೇಳಿದರು.

ರೈತರಿಗೆ ನ್ಯಾಯಯುತ ಬೆಲೆ ಖಚಿತಪಡಿಸುವ ಮಾದರಿ ಹಾಗೂ ಪ್ರಾಯೋಗಿಕ ಯೋಜನೆಯನ್ನು ಇಡೀ ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಜಾರಿಗೆ ತರಲು ನನ್ನ ಸರ್ಕಾರ ಉತ್ಸುಕವಾಗಿದೆ. ಆತಂಕದ ದಿನಗಳನ್ನು ಇನ್ನಿಲ್ಲ. ಧ್ವನಿ ಇಲ್ಲದ ರೈತರಿಗೆ ಧ್ವನಿಯಾಗಬೇಕು ಎಂಬುದು ಸರ್ಕಾರದ ಆಶಯ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗಬಾರದು ಎಂದು ಈ ಸದನದ ಮೂಲಕ ಮನವಿ ಮಾಡುತ್ತೇನೆ ಎಂದರು.

ಮೇವು ಭದ್ರತೆ ನೀತಿ ಜಾರಿ

ನೂತನ ಸರ್ಕಾರ ರಾಜ್ಯ ಮೇವು ಭದ್ರತಾ ನೀತಿ ರೂಪಿಸಲು ಮುಂದಾಗಿದೆ.

ವಿಧಾನಮಂಡಲದಲ್ಲಿ ಭಾಷಣ ಮಾಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರು, ಕರ್ನಾಟಕವು ಹಾಲಿನ ಸಂಗ್ರಹಣೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಹೊದಂದಿದೆ. ಮೊಟ್ಟೆಗಳ ಉತ್ಪಾದನೆಯಲ್ಲಿ ಏಳನೇ ಸ್ಥಾನ ಮತ್ತು ಮಾಂಸದ ಉತ್ಪಾದನೆಯಲ್ಲಿ 11ನೇ ಸ್ಥಾನ ಗಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮೇವು ಭದ್ರತಾ ನೀತಿ ರೂಪಿಸಲಾಗುವುದು. ಅಲ್ಲದೆ, ಚರ್ಮ ಸಂಸ್ಕರಣೆ ಮತ್ತು ಹದ ಮಾಡುವ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಇಡೀ ರಾಜ್ಯದ ಕೆರೆಗಳ ಭರ್ತಿ

ಕೆರೆಗಳನ್ನು ಭರ್ತಿ ಮಾಡುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದ್ದಾರೆ.

ಸರ್ಕಾರವು ಹೆಚ್ಚುವರಿ ನೀರಾವರಿ ಸಾಮರ್ಥ್ಯ ಕಲ್ಪಿಸಲು ನಿರ್ದಿಷ್ಟಯೋಜನೆ ರೂಪಿಸಲಿದೆ. ಕಿರು ನೀರಾವರಿ ವ್ಯವಸ್ಥೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಕಾಲುವೆಗಳಲ್ಲಿ ನೀರಿನ ಹರಿವನ್ನು ಮಾಪನ ಮಾಡಲು ಮೇಲ್ವಿಚಾರಣಾ ನಿಯಂತ್ರಣ ಮತ್ತು ದತ್ತಾಂಶ ಆರ್ಜನೆ (ಎಸ್‌ಸಿಎಡಿಎ) ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.

Follow Us:
Download App:
  • android
  • ios